ಭಾನುವಾರವು ದೇಶದ ರಕ್ಷಣಾ ಕ್ಷೇತ್ರದಲ್ಲಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್ನ ಲಕ್ನೋದ ನೋಡ್ನಲ್ಲಿ ವಿಶ್ವದ ಅತ್ಯಂತ ವಿನಾಶಕಾರಿ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ನ ಉತ್ಪಾದನಾ ಘಟಕವನ್ನು ಉದ್ಘಾಟಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಯಿಂದ ವರ್ಚುವಲ್ ಆಗಿ ಸಮಾರಂಭದಲ್ಲಿ ಭಾಗಿಯಾದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯೋಜನೆಗೆ ಚಾಲನೆ ನೀಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಎಂ ಯೋಗಿ ಅವರು ಟೈಟಾನಿಯಂ ಮತ್ತು ಸೂಪರ್ ಅಲಾಯ್ ಮೆಟೀರಿಯಲ್ಸ್ ಪ್ಲಾಂಟ್ (ಸ್ಟ್ರಾಟೆಜಿಕ್ ಮೆಟೀರಿಯಲ್ಸ್ ಟೆಕ್ನಾಲಜಿ ಕಾಂಪ್ಲೆಕ್ಸ್) ಅನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ”ಉತ್ತರ ಪ್ರದೇಶ ಮತ್ತು ನಮ್ಮ ಇಡೀ ದೇಶಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ನಮ್ಮ ಸೇನಾಪಡೆಗಳಿಗೆ ಬಲ ನೀಡುವ, ಶತ್ರುಗಳನ್ನು ವಿನಾಶ ಮಾಡುವ ಆ ಶಕ್ತಿಯನ್ನು ಪೂಜಿಸುವ ದಿನ ಇದಾಗಿದೆ. ನನಗೆ ವೈಯಕ್ತಿಕವಾಗಿಯೂ ಒಂದು ಪ್ರಮುಖ ದಿನ. ಏಕೆಂದರೆ ನನ್ನ ನಗರ ಲಕ್ನೋ ಬಗ್ಗೆ ನನಗೆ ಒಂದು ಕನಸಿತ್ತು. ಭಾರತದ ರಕ್ಷಣಾ ವಲಯವನ್ನು ಬಲಪಡಿಸುವಲ್ಲಿ ನನ್ನ ನಗರವು ಪ್ರಮುಖ ಕೊಡುಗೆ ನೀಡುತ್ತದೆ. ಆ ಕನಸು ಈಗ ನನಸಾಗುತ್ತಿದೆ” ಎಂದು ಹೇಳಿದರು.
”ಬ್ರಹ್ಮೋಸ್ ಏಕೀಕರಣ ಮತ್ತು ಪರೀಕ್ಷಾ ಸೌಲಭ್ಯದ ಉದ್ಘಾಟನೆಯು ಬಹಳ ಮುಖ್ಯವಾಗಿದೆ. ಏಕೆಂದರೆ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ. 1998ರ ಈ ದಿನದಂದು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ನಮ್ಮ ವಿಜ್ಞಾನಿಗಳು ಪೋಖ್ರಾನ್ನಲ್ಲಿ ಪರಮಾಣು ಪರೀಕ್ಷೆ ನಡೆಸುವ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದರು. ಆ ಪರೀಕ್ಷೆಯು ನಮ್ಮ ವಿಜ್ಞಾನಿಗಳು, ಎಂಜಿನಿಯರ್ಗಳು, ರಕ್ಷಣಾ ಸಿಬ್ಬಂದಿ ಮತ್ತು ಇತರ ಅನೇಕರ ಅವಿಶ್ರಾಂತ ಪ್ರಯತ್ನದ ಫಲವಾಗಿತ್ತು” ಎಂದು ರಕ್ಷಣಾ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
ಚಂದ್ರಯಾನ ಮಿಷನ್, ಯುದ್ಧ ವಿಮಾನಗಳಲ್ಲಿ ಬಳಕೆ: ”ಈ ಸ್ಥಾವರವು ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಉತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸಲಿದೆ. ಅವುಗಳನ್ನು ಚಂದ್ರಯಾನ ಮಿಷನ್ ಮತ್ತು ಯುದ್ಧ ವಿಮಾನಗಳಲ್ಲಿ ಬಳಸಲಾಗುವುದು. ಅಲ್ಲದೆ, ಬ್ರಹ್ಮೋಸ್ ಏರೋಸ್ಪೇಸ್ನ ಏಕೀಕರಣ ಮತ್ತು ಪರೀಕ್ಷಾ ಸೌಲಭ್ಯ ಯೋಜನೆಯನ್ನು ಸಹ ಉದ್ಘಾಟಿಸಲಾಯಿತು. ಇದು ಕ್ಷಿಪಣಿಗಳ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ” ಎಂದು ತಿಳಿಸಿದರು.