ಟಿಬೆಟ್: ಚೀನಾ ಆಕ್ರಮಿತ ಟಿಬೆಟ್‌ನಲ್ಲಿ ಸೋಮವಾರ ಬೆಳಗಿನ ಜಾವ 2.41ಕ್ಕೆ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.7ರಷ್ಟು ದಾಖಲಾಗಿದೆ. ಭೂಮಿ ನಡುಗುತ್ತಿದ್ದಂತೆ, ಭಯಭೀತರಾದ ಜನರು ಮನೆಗಳಿಂದ ಹೊರಗಡೆ ಓಡಿ ಬಂದಿದ್ಧಾರೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು (NCS) ಅದರ ತೀವ್ರತೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ವರದಿಗಳ ಪ್ರಕಾರ, ಭೂಕಂಪವು ನೆಲದಿಂದ ಕೇವಲ 9 ಕಿ.ಮೀ. ಆಳದಲ್ಲಿ ಉಂಟಾಗಿದೆ. ಇದರಿಂದಾಗಿ ಪ್ರಬಲ ಕಂಪನಗಳು ಸಂಭವಿಸಿದ ಅನುಭವವಾಗಿದೆ. ಆದರೆ ಈ ಭೂಕಂಪದಿಂದ ಯಾವುದೇ ದೊಡ್ಡ ಹಾನಿಯಾದ ಬಗ್ಗೆ ಇಲ್ಲಿಯವರೆಗೆ ಯಾವುದೇ ವರದಿಗಳು ಆಗಿಲ್ಲ.
ಟಿಬೆಟ್‌ನಲ್ಲಿ ಆಗಾಗ್ಗೆ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ. ಅಲ್ಲದೆ, ಇತ್ತೀಚೆಗೆ ಕಳೆದ ಶುಕ್ರವಾರ ಚಿಲಿ ಮತ್ತು ಅರ್ಜೆಂಟೀನಾದಲ್ಲಿ 7.4ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟವಾಗಿರಲಿಲ್ಲ. ಮುಂಜಾಗೃತಾ ಕ್ರಮವಾಗಿ ಚಿಲಿಯ ಅಧಿಕಾರಿಗಳು ದೇಶದ ದಕ್ಷಿಣ ಭಾಗದಲ್ಲಿರುವ ಮೆಗೆಲ್ಲನ್ ಜಲಸಂಧಿಯ ಕರಾವಳಿ ಪ್ರದೇಶದ ಜನತೆಗೆ ಮುನ್ನೆಚ್ಚರಿಕೆ ನೀಡಿದ್ದರು.
ಮೇ 1ರಂದು ಪಾಕಿಸ್ತಾನದಲ್ಲಿಯೂ ಬಲವಾದ ಭೂಕಂಪನ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4ರಷ್ಟು ದಾಖಲಾಗಿತ್ತು. ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಈ ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂಕುಷ್ ಪರ್ವತಗಳಲ್ಲಿ ದಾಖಲಾಗಿತ್ತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಏಪ್ರಿಲ್ 30ರಂದು ರಾತ್ರಿ 9:58ಕ್ಕೆ ಕೂಡ ಭೂಕಂಪನ ಉಂಟಾಗಿತ್ತು.