ವಿವಿಧ ಹೈಕೋರ್ಟ್ ಗಳಿಗೆ ರಾಜ್ಯ ಹೈಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳ ವರ್ಗ

Ravi Talawar
ವಿವಿಧ ಹೈಕೋರ್ಟ್ ಗಳಿಗೆ ರಾಜ್ಯ ಹೈಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳ ವರ್ಗ
WhatsApp Group Join Now
Telegram Group Join Now

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘದ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸಿನಂತೆ ರಾಜ್ಯ ಹೈಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್ ಗಳಿಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿರುವ ಪ್ರತ್ಯೇಕ ಅಧಿಸೂಚನೆಗಳಲ್ಲಿ ಕೊಲಿಜಿಯಂ ಶಿಫಾರಸಿನಂತೆ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನು ಒಡಿಶಾ, ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನು ಕೇರಳ, ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರನ್ನು ಗುಜರಾತ್ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್ ಗೆ ವರ್ಗಾಯಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಬಗ್ಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಕೇಂದ್ರ ಸಚಿವರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಕೊಲಿಜಿಯಂ ನ್ಯಾಯಮೂರ್ತಿಗಳಿಗೆ ವರ್ಗಾವಣೆಯನ್ನು ತಡೆಹಿಡಿಯುವಂತೆ ಕೋರಿ ಮನವಿ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್ ಕೊಲಿಜಿಯಂ ಸ್ಪಷ್ಟನೆ ನೀಡಿ, ಉನ್ನತ ನ್ಯಾಯಾಲಯಗಳಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆ ಕಾಪಾಡಲು ಮತ್ತು ನ್ಯಾಯದಾನದ ಗುಣಮಟ್ಟ ಎತ್ತರಿಸುವ ನಿಟ್ಟಿನಲ್ಲಿ ಏಪ್ರಿಲ್ 15 ಮತ್ತು 19ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ವರ್ಗಾವಣೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿತ್ತು.

WhatsApp Group Join Now
Telegram Group Join Now
Share This Article