ಬೆಂಗಳೂರು, ಏಪ್ರಿಲ್ 22: ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ ಹವಾ ಸೃಷ್ಟಿಸಲು ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಮುಂದಾಗಿದೆ. ದೆಹಲಿಯಲ್ಲಿ ಮಾರಾಟ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಇದೀಗ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಫ್ ಚಿಂತನೆ ನಡೆಸಿದೆ. ದಕ್ಷಿಣ ಭಾರತದ ವ್ಯಾಪ್ತಿ ಮೀರಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಯೋಜನೆಯ ಭಾಗವಾಗಿ ಕೆಎಂಎಫ್ ಈ ಯೋಜನೆಗೆ ಮುಂದಾಗಿದೆ ಎನ್ನಲಾಗಿದೆ.
ಮಧ್ಯ ಪ್ರದೇಶದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ ಕೋಲ್ಡ್ ಸ್ಟೋರೇಜ್ ಸರಪಳಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಪೌಷ್ಟಿಕಾಂಶ ಸಂರಕ್ಷಿಸಲು ಮತ್ತು ಹಾಳಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.