ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (DGP) ಓಂ ಪ್ರಕಾಶ್ ಅವರನ್ನು ಅವರ ಪತ್ನಿ ಪಲ್ಲವಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಅವರ ಹತ್ಯೆಯ ಹಿಂದಿನ ಸತ್ಯವನ್ನು ವಿವರವಾದ ತನಿಖೆಯಿಂದ ಹೊರತರಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ಹೇಳಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿರುವ ತಮ್ಮ ಎಚ್ಎಸ್ಆರ್ ಲೇಔಟ್ ನಿವಾಸದಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ‘ಮಾಜಿ ಡಿಜಿಪಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ. ಅವರ ಪತ್ನಿ (ಪಲ್ಲವಿ) ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ವಿವರವಾದ ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತದೆ’ ಎಂದು ತಿಳಿಸಿದರು.
2015ರಲ್ಲಿ ನಾನು ಗೃಹ ಸಚಿವರಾಗಿದ್ದಾಗ ಓಂ ಪ್ರಕಾಶ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಗಿದ್ದರು. ತನಿಖೆ ಆರಂಭವಾಗಿದೆ ಮತ್ತು ತನಿಖಾಧಿಕಾರಿ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲವಾದ್ದರಿಂದ ತನಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕೊಲೆಗೆ ಕಾರಣ ಏನೆಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಹೇಳಿದರು.