ಬೆಂಗಳೂರು: ರಾಜ್ಯದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ರಹಸ್ಯ ಕೊನೆಗೂ ಬಹಿರಂಗಗೊಂಡಿದೆ. ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರೇ ಕೊಲೆ ರಹಸ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ನಾನು ಮತ್ತು ಮಗಳು ಇವರ ಕಾಟದಿಂದ ತುಂಬಾ ಬೇಸತ್ತು ಹೋಗಿದ್ದೆವು. ಅದೇ ರೀತಿ ಇಂದು ಬೆಳಗ್ಗೆಯಿಂದಲೂ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋದಾಗ ನಮ್ಮನ್ನೇ ಕೊಲೆ ಮಾಡಲು ಗಂಡ ಓಂ ಪ್ರಕಾಶ್ ಪ್ರಯತ್ನ ಮಾಡಿದರು. ಆಗ ಅದರಿಂದ ತಪ್ಪಿಸಿಕೊಳ್ಳಲು ತುಂಬಾ ಪರದಾಡಿದ್ದೆವು.
ನಮ್ಮನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ದೀವಿ. ನಾವು ಬದುಕುಳಿಯಬೇಕೆಂದರೆ ಅವರನ್ನೇ ಕೊಲೆ ಮಾಡುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದೆವು. ನಂತರ, ಓಂ ಪ್ರಕಾಶ್ ಮೇಲೆ ಖಾರದ ಪುಡಿ ಹಾಕಲಾಯಿತು. ನಂತರ, ಅವರು ಓಡಾಡಲು ಆಗದಂತೆ ಅಡುಗೆ ಎಣ್ಣೆಯನ್ನು ಸುರಿಯಲಾಯಿತು.ಬಳಿಕ ಕೈ-ಕಾಲು ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಲಾಯಿತು ಎಂದು ಪಲ್ಲವಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
ಓಂ ಪ್ರಕಾಶ್ ಅವರ ಎದೆ, ಹೊಟ್ಟೆ, ಕೈ ಸೇರಿ ದೇಹದ ಇತರೆ ಭಾಗಗಳಿಗೆ 10ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಲಾಗಿದ್ದು, ಚಾರು ಇರಿತದ ಬಳಿಕ ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರು ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ (ಭ್ರಮೆ ಕಾಯಿಲೆ) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆನ್ನಲಾಗುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.