ಹೊಸಪೇಟ್ಪ (ವಿಜಯನಗರ): ಪರಂಪರೆಯೆಂದರೆ ಕೇವಲ ಸ್ಮಾರಕಗಳು ಮತ್ತು ನೆನಪುಗಳು ಮಾತ್ರವಲ್ಲ — ಅದು ನಮ್ಮ ಸಂಸ್ಕೃತಿಯ ಜೀವಾಳ. ಅದನ್ನು ಸಂರಕ್ಷಿಸುವುದು ಎಂದರೆ ನಮ್ಮ ಪೂರ್ವಜರನ್ನ ಗೌರವಿಸುವುದು ಜೊತೆಗೆ ಮುಂದಿನ ಪೀಳಿಗೆಗಳಿಗೆ ಪ್ರೇರಣೆಯ ಬೆಳಕು ಹರಡುವುದಾಗಿದೆ ಎಂದು ಕಮಲಾಪುರ-ಹಂಪಿಯ ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಹೇಳಿದರು.
ಅವರು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ-ಹಂಪಿ, ಇನ್ಸಿಟ್ಯೂಷನ್ ಆಫ್ ಇಂಜಿನೀಯರ್ಸ್ (ಇಂಡಿಯಾ), ಸ್ಥಳೀಯ ಕೇಂದ್ರ, ಮುನಿರಾಬಾದ್ ಹಾಗೂ ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ, ವಿದ್ಯಾರಣ್ಯ, ಕಮಲಾಪುರ ಇವರ ಸಹಯೋಗದಲ್ಲಿ ಹಂಪಿಯ ಉತ್ಪನನ ನೆಲೆ ಮತ್ತು ವೀರಭದ್ರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಂಪರೆ ದಿನಾಚರಣೆ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪರಂಪರೆಯ ರಕ್ಷಣೆ ಅತ್ಯಗತ್ಯ; ರಕ್ಷಣೆ ಎಂದರೆ ಕೇವಲ ಇತಿಹಾಸವನ್ನು ಉಳಿಸಿಕೊಳ್ಳುವುದು ಮಾತ್ರವಲ್ಲ, ಅದು ನಮ್ಮ ಒಳಗಿನ ಸಂಸ್ಕೃತಿಯ ಅರಿವನ್ನು ಜೀವಂತವಾಗಿಡುವ ಹಾಗೂ ಸಮಾಜದ ಸಾಂಸ್ಕೃತಿಕ ಬುನಾದಿಯನ್ನು ಬಲಪಡಿಸುವ ಒಂದು ಜವಾಬ್ದಾರಿಯಾಗಿದೆ. ನಮ್ಮ ಪರಂಪರೆಯ ಆಚರಣೆಗಳಲ್ಲಿ ವೈಜ್ಞಾನಿಕತೆಯ ಅಂಶಗಳು ಅಡಗಿವೆ ಎಂದು ಉದಾಹರಣೆಗಳೊಂದಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಆರ್. ಮಂಜನಾಯ್ಕ, ಪುರಾತತ್ತ್ವ ಸಹಾಯಕರು, ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ-ಹಂಪಿ ಅವರು ಪರಂಪರೆಯ ಸಂರಕ್ಷಣೆಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಹಂಪಿಯ ಪ್ರಾಗೈತಿಹಾಸಿಕ ಕಾಲದ ಬಗ್ಗೆ ಬೆಳಕು ಚೆಲ್ಲಿದರು.ಹಾಗೂ ವಿಜಯನಗರ ಕಾಲದ ಐತಿಹಾಸಿಕ ಆಚರಣೆಗಳ ಬಗ್ಗೆ ವಿವರಿಸಿದರು. ಹಂಪಿಯ ಜಾತ್ರೆ, ಫಲಪೂಜೆ, ಮತ್ತಿತರ ಆಚರಣೆಗಳು ವಿಜಯನಗರ ಸಾಮ್ರಾಜ್ಯದಿಂದ ಪ್ರಸ್ತುತದವರೆಗೂ ಮುಂದುವರೆದುಕೊಂಡು ಬಂದಿರುವುದು ನಮ್ಮ ಪರಂಪರೆಯ ಹೆಮ್ಮೆ. ಇಂತಹ ಪರಂಪರೆಯನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದರ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಬಸವರಾಜ ಎಮ್ಮಿಗನೂರ, ಪ್ರಾಂಶುಪಾಲರು, ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ, ಕಮಲಾಪುರ ಇವರು ಹಂಪಿಯ ಇತಿಹಾಸವು ನಮಗೆ ರೋಮಾಂಚನಕರವಾದ ಸಂಗತಿ ಎಂದು, ಹಂಪಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಇಲಾಖೆಯೊಂದಿಗೆ ನಂಟನ್ನು ಇಟ್ಟುಕೊಂಡು ಹಂಪಿಯ ಕುರಿತ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಸ್. ಎಂ. ಶಶಿಧರ್, ಅಧ್ಯಕ್ಷರು, ದಿ ಇನ್ಸಿಟ್ಯೂಷನ್ ಆಫ್ ಇಂಜಿನೀಯರ್ಸ್ (ಇಂಡಿಯಾ), ಸ್ಥಳೀಯ ಕೇಂದ್ರ, ಮುನಿರಾಬಾದ್ ಇವರು ಹಂಪಿ ವಿರುಪಾಕ್ಷೇಶ್ವರ ದೇವಾಲಯವು ಸುಮಾರು ಒಂದೂವರೆ ಸಾವಿರ ವರ್ಷಗಳಿಂದ ನಿರಂತರ ಪೂಜೆ ಮತ್ತು ಆಚರಣೆಗಳನ್ನು ನಡೆಸಿಕೊಂಡು ಬಂದಿರುವುದು ನಮ್ಮ ಪರಂಪರೆಯ ಹೆಮ್ಮೆ; ಅಲ್ಲದೇ ಇಲ್ಲಿನ ದೇವಾಲಯಗಳು ಮತ್ತು ಇನ್ನಿತರೆ ಕಟ್ಟಡಗಳಲ್ಲಿನ ವೈಜ್ಞಾನಿಕತೆಯು ಇಂದಿನ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸ್ಫೂರ್ತಿಯಾಗಿವೆ ಎಂದು ತಿಳಿಸುತ್ತಾ, ಅಂದಿನ ಇಂಜಿನಿಯರಿಂಗ್ ಕೌಶಲ್ಯ ಮತ್ತು ಜ್ಞಾನವನ್ನು ಪ್ರಶಂಸಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಎಸ್ ಎಸ್ ಸಾತ್ಕಾರ್ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಎಸ್.ಬಿ.ಬಿ.ಎನ್. ಬಿಎಡ್ ಪದವಿ ಮಹಾವಿದ್ಯಾಲಯ, ಡಾ. ವೀಣಾ, ಸಹಾಯಕ ಪ್ರಾಧ್ಯಾಪಕರು ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ, ಕಮಲಾಪುರ, ಇಲಾಖೆಯ ಸಿಬ್ಬಂದಿ ವರ್ಗದವರು, ದಿನಗೂಲಿ ನೌಕರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಮುಂಚೆ ಉತ್ಖನ್ನನ ನೆಲೆ ಮತ್ತು ವೀರಭದ್ರ ದೇವಾಲಯದಲ್ಲಿ ಶ್ರಮದಾನದ ಮೂಲಕ ಸ್ವಚ್ಚತೆ ಕಾರ್ಯ ಮಾಡಲಾಯಿತು.