ರಾಮನಗರ: ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಅವರ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಬಿಡದಿ ಬಳಿ ನಡೆದಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸ್ಥಳಕ್ಕೆ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಬಂಧಿಕರು ಹೇಳಿದ್ದೇನು? ಘಟನೆ ಬಗ್ಗೆ ರಿಕ್ಕಿ ರೈ ಅವರ ಸಂಬಂಧಿಕರು ಪ್ರಕಾಶ್ ರೈ ಎನ್ನುವವರು ಪ್ರತಿಕ್ರಿಯಿಸಿದ್ದು, “ನನಗೆ ಮಧ್ಯರಾತ್ರಿ 12ಕ್ಕೆ ಲಾಯರ್ ನಾರಾಯಣಸ್ವಾಮಿ ಫೋನ್ ಮಾಡಿ ಹೀಗೀಗಾಗಿದೆ ಎಂದು ಹೇಳಿದ್ರು. ತಕ್ಷಣ ಬಿಡದಿ ಹತ್ರ ಬಂದೆ. ಆಗ ಸೆಕ್ಯೂರಿಟಿ, ಏನೋ ಸದ್ದು ಬಂತು, ರಿಕ್ಕಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದರು. ಬಿಡದಿ ಸರ್ಕಾರಿ ಆಸ್ಪತ್ರೆಗೆ ಹೋದೆ ಅಲ್ಲಿರಲಿಲ್ಲ. ಅಲ್ಲಿಂದ ಭರತ್ ಕೆಂಪಣ್ಣ ಆಸ್ಪತ್ರೆಗೆ ಹೋದೆ, ಅಲ್ಲಿದ್ದರು. ನೋಡಿದಾಗ ರಿಕ್ಕಿ ಅವರ ಮೂಗು ಹಾಗೂ ಬಲಕೈ ತೋಳಿನ ಭಾಗಕ್ಕೆ ಗುಂಡು ತಾಗಿ, ಗಾಯವಾಗಿತ್ತು. ಡ್ರೈವರ್ನ ಬೆನ್ನಿಗೆ ಗಾಯವಾಗಿತ್ತು. ಹಿಂಬದಿಯಲ್ಲಿದ್ದ ಕಾರಣ ರಿಕ್ಕಿ ಅವರು ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ” ಎಂದು ತಿಳಿಸಿದರು.