ನವದೆಹಲಿ: ಇಲ್ಲಿನ ಮುಸ್ತಫಾಬಾದ್ ಪ್ರದೇಶದಲ್ಲಿ ಇಂದು ಮುಂಜಾನೆ ನಾಲ್ಕು ಹಂತದ ಕಟ್ಟಡ ಕುಸಿದು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಅನೇಕರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ಇದೆ.
ಘಟನೆ ಕುರಿತು ಮಾಹಿತಿ ನೀಡಿದ ಈಶಾನ್ಯ ಜಿಲ್ಲೆಯ ಹೆಚ್ಚುವರಿ ಡಿಸಿಪಿ ಸಂದೀಪ್ ಲಂಬಾ, ’’ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿತಗೊಂಡಿದೆ. ಇದುವರೆಗೆ 14 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯ ಸಾಗಿದ್ದು, ಇನ್ನು 8 ರಿಂದ 10 ಮಂದಿ ಸಿಲುಕಿರುವ ಶಂಕೆ ಇದೆ. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ದೆಹಲಿ ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಾವು ಸ್ಥಳಕ್ಕೆ ಧಾವಿಸುವ ಹೊತ್ತಿಗೆ ಸಂಪೂರ್ಣ ಕಟ್ಟಡ ಕುಸಿದಿದ್ದು, ಅನೇಕ ಜನರು ಅವಶೇಷಷಗಳ ಅಡಿ ಸಿಲುಕಿದ್ದಾರೆ. ಎನ್ಡಿಆರ್ಎಫ್, ದೆಹಲಿ ಅಗ್ನಿ ಶಾಮಕ ದಳ ಅವರ ರಕ್ಷಣೆಯನ್ನು ನಡೆಸುತ್ತಿದೆ ಎಂದು ಅಗ್ನಿಶಾಮಕದಳದ ಅಧಿಕಾರಿ ರಾಜೇಂದ್ರ ಅತ್ವಾಲ್ ತಿಳಿಸಿದ್ದಾರೆ.