ಬೆಂಗಳೂರು, ಏಪ್ರಿಲ್ 19: ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೆ ತರುವ ನಿರ್ಧಾರದಲ್ಲಿ ಸರ್ಕಾರ ದೃಢವಾಗಿ ನಿಂತಿದೆ. ಕರ್ನಾಟಕದಲ್ಲಿ ಆದಷ್ಟು ಬೇಗ ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡುತ್ತೇವೆ. ಪಕ್ಷದ ನಾಯಕ ರಾಹುಲ್ ಗಾಂಧಿಯವರ ಪತ್ರ ಹಾಗೂ ಸಾಮಾಜಿಕ ನ್ಯಾಯ, ಅಚಲವಾದ ಬದ್ಧತೆಗಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ತರುವ ವಿಚಾರವಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬರೆದ ಪತ್ರಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ ಅವರು, ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ, ತಾರತಮ್ಯ ಎದುರಿಸದಂತೆ ಆದಷ್ಟು ಬೇಗ ಕಾಯ್ದೆಯನ್ನು ಜಾರಿಗೆ ತರುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನ, ಸಹಾನುಭೂತಿಯ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದಿದ್ದಾರೆ.