ಮಾಸ್ಕೋ(ರಷ್ಯಾ): ಕೀವ್ನಲ್ಲಿರುವ ಭಾರತೀಯ ಔಷಧೀಯ ಕಂಪನಿಯೊಂದರ ಗೋಡೌನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ ಎಂಬ ಉಕ್ರೇನ್‌ನ ಆರೋಪವನ್ನು ರಷ್ಯಾ ಗುರುವಾರ ತಳ್ಳಿಹಾಕಿದೆ.
ಕುಸುಮ್ ಹೆಲ್ತ್ಕೇರ್ ನಿರ್ವಹಣೆಯ ಗೋದಾಮನ್ನು ಕೆಡವಿದ ಕ್ಷಿಪಣಿ, ಉಕ್ರೇನ್‌ನ ಸ್ವಂತ ವಾಯು ರಕ್ಷಣಾ ಕ್ಷಿಪಣಿಗಳಲ್ಲಿ ಒಂದಾಗಿರಬಹುದು ಎಂದು ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿ ಉಕ್ರೇನ್ ಮೇಲೆ ಪ್ರತಿ ಆರೋಪ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಷ್ಯಾ, “ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಹರಡಿದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ರಷ್ಯಾದ ಸಶಸ್ತ್ರ ಪಡೆಗಳು ಏಪ್ರಿಲ್ 12ರಂದು ಕೀವ್ ಪೂರ್ವಭಾಗದಲ್ಲಿರುವ ಕುಸುಮ್ ಹೆಲ್ತ್ಕೇರ್ನ ಫಾರ್ಮಸಿ ಗೋದಾಮಿನ ಮೇಲೆ ದಾಳಿ ಮಾಡಿಲ್ಲ ಅಥವಾ ದಾಳಿ ಮಾಡುವ ಯಾವುದೇ ಯೋಜನೆಯನ್ನೂ ಮಾಡಿಲ್ಲ ಎಂದು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿ ಖಚಿತಪಡಿಸುತ್ತದೆ” ಎಂದು ಹೇಳಿದೆ.
ರಷ್ಯಾ ಸ್ಪಷ್ಟನೆ ಹೀಗಿದೆ: ಆ ದಿನ ರಷ್ಯಾದ ಯುದ್ಧತಂತ್ರದ ವಾಯುಯಾನ, ಮಾನವ ರಹಿತ ವೈಮಾನಿಕ ವಾಹನಗಳು ಮತ್ತು ಕ್ಷಿಪಣಿ ಪಡೆಗಳು, ಸಂಪೂರ್ಣವಾಗಿ ಬೇರೆಯೇ ಸ್ಥಳದಲ್ಲಿದ್ದ ಉಕ್ರೇನಿಯನ್ ಮಿಲಿಟರಿ ಕೈಗಾರಿಕಾ ಸಂಕೀರ್ಣದ ವಾಯುಯಾನ ಸ್ಥಾವರ, ಮಿಲಿಟರಿ ವಾಯುನೆಲೆಯ ಮೂಲಸೌಕರ್ಯ ಮತ್ತು ಶಸ್ತ್ರಸಜ್ಜಿತ ವಾಹನ ದುರಸ್ತಿ ಮತ್ತು ಯುಎವಿ ಅಸೆಂಬ್ಲಿ ಕಾರ್ಯಾಗಾರಗಳ ಮೇಲೆ ದಾಳಿ ನಡೆಸಿದ್ದವು ಎಂದು ವಿವರಿಸಿದೆ.