ಬೆಳಗಾವಿ: ”ನಾನಂತೂ ಬಿಡಿಸಿಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ನಮ್ಮ ಮಾರ್ಗದರ್ಶನದಲ್ಲೇ ಆಡಳಿತ ಮಂಡಳಿಯು ಗೆಲ್ಲಲಿದೆ. ಅಕ್ಟೋಬರ್‌ನಲ್ಲಿ ನಮ್ಮವರೇ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ” ಎಂದು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ಜಿಲ್ಲೆಯಲ್ಲಿ ಅನೇಕ ಶಾಸಕರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ, ಬ್ಯಾಂಕಿನ ಒಳಗೆ ಯಾವುದೇ ರಾಜಕಾರಣ ಇಲ್ಲ. ಹೊರಗೆ ಎಷ್ಟೇ ರಾಜಕೀಯ ಜಗಳವಿದ್ದರೂ ಬ್ಯಾಂಕ್ ವಿಷಯ ಬಂದಾಗ ಎಲ್ಲರೂ ಒಂದೇ. ರಾಜಕಾರಣವಾದರೆ ರೈತರ ಮೇಲೆ ಅದು ನೇರ ಪರಿಣಾಮ ಬೀರುತ್ತದೆ. ಹೀಗಾಗಿ, ರಾಜಕೀಯವಿಲ್ಲದೇ ಬ್ಯಾಂಕ್ ಸಾಗಲಿದೆ” ಎಂದರು.
ಬ್ಯಾಂಕ್ ನಿಲ್ಲುವುದಿಲ್ಲ: ”ಆಡಳಿತ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಟ್ಟಿಯಾಗಿ ಬ್ಯಾಂಕ್ ಮುನ್ನಡೆದಿದೆ. ಈ ವರ್ಷವೂ ಹೆಚ್ಚಿನ ಆದಾಯ ಗಳಿಸುವ ಮೂಲಕ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಇನ್ನೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ ಬ್ಯಾಂಕ್ ನಮ್ಮದಾಗಿದೆ. ವಸೂಲಾತಿಯೂ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ಯಾವುದೇ ಕಾರ್ಖಾನೆಯ ಕಟಬಾಕಿ ಉಳಿದಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾರೇ ಇದ್ದರೂ ಬ್ಯಾಂಕ್ ನಿರಂತರವಾಗಿ ಮುನ್ನಡೆಯಲಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ನಿಲ್ಲುವುದಿಲ್ಲ” ಎಂದು ಬಾಲಚಂದ್ರ ಹೇಳಿದರು.