ಬೆಳಗಾವಿ.ಹುಟ್ಟಿನಿಂದ ಸಾವಿನವರೆಗೂ ಬೆಲೆಯೇರಿಕೆ ಮಾಡಿರುವ ಅಪಕೀರ್ತಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.
ಅವರು ಮಂಗಳವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಸಿಸಿ ಮಾತನಾಡಿ ದೇಶದಲ್ಲೇ ಅತ್ಯಂತ ದುಬಾರಿಯಾದ ಜೀವನವನ್ನು ಕರ್ನಾಟಕದ ಜನತೆಯು ನಡೆಸುವಂತಹ ದುಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ.
ಗಾಳಿಯನ್ನು ಹೊರತು ಪಡಿಸಿ ಮಿಕ್ಕೆಲ್ಲಾ ವಸ್ತುಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದೆ ಎಂದರು.
ಜನರ ಕಷ್ಟವನ್ನು ಕಿಂಚಿತ್ತು ಅರ್ಥ ಮಾಡಿಕೊಳ್ಳಲು ಅಸಮರ್ಥವಾದ ಆಡಳಿತವನ್ನು ಸಿದ್ದರಾಮಯ್ಯ ನೀಡುತ್ತಿದೆ.
ಮತಕೊಟ್ಟು ಅಧಿಕಾರಕ್ಕೆ ತಂದ ಮತದಾರರಿಗೆ ವರವಾಗುವ ಬದಲು ಈ ಸರ್ಕಾರ ಶಾಪಗ್ರಸ್ಥವಾಗಿದೆ
ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು 3/- ರೂ ಮಾಡುವುದರೊಂದಿಗೆ ಬೆಲೆಯೇರಿಕೆಯ ಶುಭಾರಂಭ ಆರಂಭಿಸಿದ ರಾಜ್ಯ ಸರ್ಕಾರ ಈಗ ಹಾಲಿನ ದರವನ್ನು ರೂ 4 ಹೆಚ್ಚಳ ಮಾಡುವವರೆಗೂ ಒಂದಾದ ಮೇಲೆ ಒಂದು ಪದಾರ್ಥಗಳ ಬೆಲೆಯನ್ನು ಕಿಂಚಿತ್ತು ಸಂವೇದನಾಶೀಲತೆಯಿಲ್ಲದೆ ಹೆಚ್ಚಳ ಮಾಡುತ್ತಿದ್ದಾರೆ.
ಹಾಲಿನ ದರವನ್ನು ಕಳೆದ ಎರಡು ವರ್ಷದಲ್ಲಿ ಮೂರು ಬಾರಿ ಒಟ್ಟು 9/- ರೂ ಹೆಚ್ಚಳ ಮಾಡಿ ಬಡವರ ಮತ್ತು ಮಧ್ಯಮ ವರ್ಗದವರ ಮಗ್ಗಲು ಮುರಿಯುವ ಕೆಲಸ ಮಾಡಿದ್ದಾರೆ.
ದೌರ್ಭಾಗ್ಯವೆಂದರೆ ತಮ್ಮ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ರೈತ ಸಮುದಾಯವನ್ನು ಗುರಾಣಿಯ ಹಾಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ.
ಸರ್ಕಾರ ಹೆಚ್ಚಳ ಮಾಡಿರುವ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂಬ ದಾರಿ ತಪ್ಪಿಸುವ ಮಾತನ್ನು ಆಡುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಹಾಲು ದರವನ್ನು ಹೆಚ್ಚಳ ಮಾಡಿದಾಗಲೂ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದರೆ ವಿನಹ ಹಣವನ್ನು ವರ್ಗ ಮಾಡಲೇ ಇಲ್ಲ.
ಆಶ್ಚರ್ಯವೆಂದರೆ ಸರ್ಕಾರ ರಾಜ್ಯದ ಹಾಲು ದರವನ್ನು ಮಾತ್ರ ಇತರ ರಾಜ್ಯಗಳ ಹಾಲು ದರಕ್ಕೆ ಹೋಲಿಕೆ ಮಾಡಿ ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಜನ ಮತ ಕೊಟ್ಟಿರುವುದು ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಹೊರತು ಹೊರ ರಾಜ್ಯದ ಸರ್ಕಾರ ಚುನಾಯಿಸಲು ಅಲ್ಲ.
ಹಾಗೂ ಇವರಿಗೆ ಇತರ ರಾಜ್ಯಗಳ ದರವನ್ನು ಹೋಲಿಕೆ ಮಾಡ ಬೇಕಾದರೆ ನಮ್ಮ ರಾಜ್ಯದ ಇಂಧನ ಬೆಲೆಯನ್ನು ಬಿಜೆಪಿ ಆಡಳಿತವಿರುವ ಗುಜರಾತ್, ಯುಪಿ, ಹರಿಯಾಣ, ಗೋವಾ ಮತ್ತು ಪಾಂಡಿಚೇರಿಗೆ ಹೋಲಿಕೆ ಮಾಡಿ ನಮ್ಮ ರಾಜ್ಯದ ಇಂಧನ ದರವನ್ನು ಅದರ ಸಮಕ್ಕೆ ತರಬೇಕೆಂದು ಒತ್ತಾಯಿಸುತ್ತೇವೆ.
ಸರ್ಕಾರ ಆದಾಯ ಹೆಚ್ಚಳ ಮಾಡಲು ಎಷ್ಟು ಬರಗೆಟ್ಟಿದೆಯೆಂದರೆ ಬಡ ರೋಗಿಗಳು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಯನ್ನು ಸುಲಿಗೆ ಕೇಂದ್ರವನ್ನಾಗಿ ಮಾಡಿ ಕೊಂಡಿದೆ. ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರ ಬಡವರ ಹಣವನ್ನು ಆದಾಯ ಮೂಲವಾಗಿಸಿರುವುದು ಅತ್ಯಂತ ನೋವಿನ ಸಂಗತಿ.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ.
ವಿದ್ಯುತ್ ಇಲಾಖೆಯ ನೌಕರರಿಗೆ ಪಿಂಚಣಿ ಕೊಡಲು ಹಣವಿಲ್ಲದೆ ದಿವಾಳಿಯಾಗಿರುವ ಸರ್ಕಾರ ವಿದ್ಯುತ್ ಗ್ರಾಹಕರಿಂದ ಸುಲಿಗೆ ಮಾಡಿ ಕೊಡಲು ಮುಂದಾಗಿರುವುದು ನಾಚಿಗೇಡಿನ ಸಂಗತಿ.
ಬೆಂಗಳೂರು ಮೆಟ್ರೊ ಮತ್ತು ಬಸ್ ದರ ಏರಿಕೆಯು ಕೆಳಗೆ ಬಿದ್ದವರ ಮೇಲೆ ಕಲ್ಲು ಹೇರಿದಂತಾಗಿದೆ.
ಬಿತ್ತನೆ ಬೀಜ ದರವನ್ನು ಹೆಚ್ಚಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ್ದಾರೆ.
ಬೆಲೆಯೇರಿಕೆ ಬಿಸಿಗೆ ತತ್ತರಿಸಿರುವ ರಾಜ್ಯದ ಜನತೆಯು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸಂಕಷ್ಟದ ಈ ಸಮಯದಲ್ಲಿ ಬಿಜೆಪಿ ಜನರ ಧ್ವನಿಯಾಗಿ ನಿಲ್ಲುತ್ತಿದೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ದರಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಏಪ್ರಿಲ್ 2 ರಂದು ಅಹೋರಾತ್ರಿ ಧರಣಿ ಕೈಗೊಳ್ಳುತ್ತಿದ್ದೆವೆ ಎಂದರು.
ಈ ಧರಣಿಯಲ್ಲಿ ಬಿಜೆಪಿಯ ಶಾಸಕರು, ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.
ರಾಜ್ಯದ ಇತಿಹಾಸದಲ್ಲೆ ಕಂಡ ಅತ್ಯಂತ ಜನವಿರೋಧಿ ಸರ್ಕಾರವನ್ನು ಕಾಂಗ್ರೆಸ್ ನಡೆಸುತ್ತಿದೆ.
ಇಂತಹ ಸುಲಿಗೆ ಸರ್ಕಾರದ ಜನವಿರೋಧಿ ನೀತಿಯ ವಿರುದ್ದ ಬಿಜೆಪಿ ರಣಕಹಳೆ ಮೊಳಗಿಸುತ್ತಿದ್ದೆ.
ರಾಜ್ಯದ ಜನತೆಯ ಕಷ್ಟವನ್ನು ಪರಿಹರಿಸಲು ನಮ್ಮ ಹೋರಾಟವು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ, ಬಿಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಮುರುಗೆoದ್ರಗೌಡ ಪಾಟೀಲ,ಮಹಾನಗರ ಪಾಲಿಕೆ ಸದಸ್ಯರು ಕೊಂಗಾಳಿ ವಕೀಲರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.