ಬಳ್ಳಾರಿ29..: ಇಲ್ಲಿನ ಹೆಸರಾಂತ ವೈದ್ಯರು, ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ ಡಾ.ಡಿ.ಶ್ರೀನಾಥ್ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬಳ್ಳಾರಿ ಜಿಲ್ಲಾ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಡಾ.ಡಿ.ಶ್ರೀನಾಥ್ ಅವರು, ನರಸಿಂಹ ಮೂರ್ತಿ ಅವರ ಪುಟರಾಗಿದ್ದು, ಕಳೆದ ಸುಮಾರು ವರ್ಷಗಳಿಂದ ವೈದ್ಯ ವೃತ್ತಿಯ ಜೊತೆಗೆ, ಎಲೆಮರೆಯ ಕಾಯಿಯಂತೆ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಡಾ. ಬಿ.ಕೆ.ಎಸ್.ಆಸ್ಪತ್ರೆಯಲ್ಲಿ ರೆಸಿಡೆನ್ಸಿಯಲ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಉತ್ತಮ ಸೇವೆ ಮುಂದುವರೆಸಿದ್ದಾರೆ. ಯಾವುದೇ ಖಾಯಿಲೆಗೆ ತುತ್ತಾದ ಸಮುದಾಯದ ಬಡ ಜನರಿಗೆ ಉಚಿತ ಚಿಕಿತ್ಸೆ ಕಲ್ಪಿಸಿ, ಕೈಲಾದಷ್ಟು ನೆರವು ನೀಡುವ ಮೂಲಕ ತಂದೆಯವರ ಅಭಿಲಾಷೆಯಂತೆ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಕೊರೊನಾ ಮಹಾಮಾರಿ ಆರ್ಭಟಿಸುವಾಗ ಅನೇಕ ಬಡ ಜನರ ಮನೆಗೆ ತೆರಳಿ, ಉಚಿತ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ನೀಡುವ ಮೂಲಕ ನೆರವಾಗಿದ್ದರು. ಇವರ ಈ ಸೇವೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗಲೂ ಕಾರಣವಾಗಿದೆ ಎಂದು ಬ್ರಾಹ್ಮಣ ಸಮಾಜದ ಅನೇಕ ಪ್ರಮುಖರು ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಆರ್.ಪ್ರಕಾಶ್ ರಾವ್, ಹಿರಿಯ ನ್ಯಾಯವಾದಿ, ಡಾಣಾಪೂರ್ ಶ್ರೀನಿವಾಸ, ಪಾಲಿಕೆ ಮಾಜಿ ಸದಸ್ಯ ನೇಮಕಲ್ ರಾವ್ ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.
ಈ ಕುರಿತು ಡಾ.ಡಿ.ಶ್ರೀನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉಸಿರು ಹೋದರೂ ಹೆಸರು ಇರಬೇಕು ಎನ್ನುವ ಹಾಗೆ, ಭಗವಂತ ಅನುಕೂಲ ಮಾಡಿದಾಗ, ಕೈಲಾದಷ್ಟು ಸಮಾಜದ ಅಭಿವೃದ್ಧಿಗೆ ಹಾಗೂ ಸಮಾಜದ ಬಡ ಜನರ ಸೇವೆ ಮಾಡಬೇಕು ಅಂದುಕೊಂಡಿರುವೆ. ಇದನ್ನು ಮುಂದುವರೆಸುವೆ, ಈ ಹಿಂದೆ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿರುವೆ, ಬ್ರಾಹ್ಮಣ ಸಮಾಜದ ಎಲ್ಲ ನಮ್ಮ ಬಾಂಧವರ ಬೆಂಬಲದೊಂದಿಗೆ ಮಹಾಸಭಾದ ಜಿಲ್ಲಾ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುವೆ, ಇದು ಅತ್ಯಂತ ಸಂತಸ ಮೂಡಿಸಿದೆ. ಬರುವ ದಿನಗಳಲ್ಲಿ ಸಮಾಜದ ಎಲ್ಲ ಬಾಂಧವರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಉಳಿಸಿಕೊಳ್ಳುವೆ, ಯಾವುದೇ ಕಾರಣಕ್ಕೂ ನನ್ನ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ಯಾಗದಂತೆ ನಡೆದುಕೊಳ್ಳುವೆ, ನನ್ನನ್ನು ಬೆಂಬಲಿಸಿ, ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.