ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಏಳು ತಿಂಗಳ ಬಳಿಕ ಇದೀಗಷ್ಟೇ ಆಕೆಯ ಮರಣ ಪ್ರಮಾಣ ಪತ್ರವನ್ನು ಅಧಿಕಾರಿಗಳು ಪೋಷಕರಿಗೆ ಒಪ್ಪಿಸಿದ್ದಾರೆ.
ಆರ್‌ಜಿ ಕರ್ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಮತ್ತು ಉಪ ಪ್ರಾಂಶುಪಾಲರ(ಎಂಎಸ್‌ವಿಪಿ) ಜೊತೆಗೆ ಆರೋಗ್ಯ ಕಾರ್ಯದರ್ಶಿ ಬುಧವಾರ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ತೆರಳಿ ಪೋಷಕರಿಗೆ ಮರಣ ಪ್ರಮಾಣ ಪತ್ರ ನೀಡಿದರು.
ಕಳೆದ ವರ್ಷದ ಆಗಸ್ಟ್ 9ರಂದು ಘಟನೆ ನಡೆದಿದ್ದು, ಅಂದಿನಿಂದಲೂ ಪೋಷಕರು ತಮ್ಮ ಮಗಳ ಮರಣ ಪತ್ರಕ್ಕಾಗಿ ಸಾಕಷ್ಟು ಮನವಿ ಮಾಡಿದ್ದರು.
“ನಮ್ಮ ಮಗಳ ಮೂಲ ಮರಣ ಪ್ರಮಾಣ ಪತ್ರಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೆವು. ಕಳೆದ ಜನವರಿಯಲ್ಲೂ ಕೂಡ ಈ ಸಂಬಂಧ ಇಮೇಲ್ ಮಾಡಿದ್ದೆವು. ಅದು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಹೋಗಬೇಕಾದ ಕಾರಣ ಸೂಕ್ತ ಸಹಕಾರ ಸಿಗಲಿಲ್ಲ. ಇದೀಗ ಆರೋಗ್ಯ ಕಾರ್ಯದರ್ಶಿ ದಿಢೀರ್ ಎಂದು ಮನೆಗೆ ಬಂದು ಮರಣ ಪ್ರಮಾಣದ ಮೂಲ ಪ್ರತಿ ಒದಗಿಸಿದ್ದಾರೆ” ಎಂದು ಪೋಷಕರು ತಿಳಿಸಿದ್ದಾರೆ.