ಬೆಳಗಾವಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗುತ್ತಿದ್ದ ಮಹಿಳೆಯ ಚಿನ್ನದ ಸರ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಹಾಂತೇಶ ನಗರದ ನಿವಾಸಿ ಉಮಾ ಮಹೇಶ್ವರ ಮಲ್ಲಾಪೂರ ಎಂಬುವವರು ತನ್ನ ನಾದಿನಿ ಪ್ರೇಮಾ ದುರದುಂಡೇಶ್ವರ ಮಲ್ಲಾಪೂರ ಜೊತೆ ಆಸ್ಪತ್ರೆಗೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದರು. ಮಾರ್ಚ್ 12ರ ರಾತ್ರಿ 8 ಗಂಟೆಯ ಸುಮಾರಿಗೆ ಆಂಜನೇಯ ನಗರದ ಅರಿಹಂತ ಬಿಲ್ಡಿಂಗ್ ನ ಮುತ್ತೂಟ್ ಮನಿ ಫೈನಾನ್ಸ್ ಮುಂದೆ ಇದ್ದಾಗ ಬೈಕ್ ನಲ್ಲಿ ಬಂದ ಇಬ್ಬರು, ಮಹಿಳೆಯ ಕೊರಳಿನಲ್ಲಿದ್ದ ಸುಮಾರು 90,000 ರೂ ಮೌಲ್ಯದ 30 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.
ಹಿಂಬದಿ ಸವಾರ ಉಮಾ ಅವರ ಸರ ಸರ ಕಸಿದುಕೊಂಡಿದ್ದು, ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮಾಲ್ಮಾರುತಿ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಮಾಲ್ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.