ಬೆಂಗಳೂರು: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಯಶಸ್ವಿಯಾಗಿಲ್ಲ, ರಾಜ್ಯ ಸರ್ಕಾರ ಯೋಜನೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದ್ದು, ಈ ನಡುವೆ ಸರ್ಕಾರ ಯೋಜನೆಯ ಪ್ರಗತಿಯನ್ನು ವಿವರಿಸಿ ಸಮರ್ಥಿಸಿಕೊಂಡಿದೆ.
ವಿಧಾನಪರಿಷತ್ ನಲ್ಲಿ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಶೇ.90ರಷ್ಟು ಬಿಲ್ ಪಾವತಿಸಲಾಗಿದೆ, ಆದರೆ ಕಾಮಗಾರಿ ಪೂರ್ಣಗೊಂಡಿದೆಯೇ?” ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇದು ಕುಡಿಯುವ ನೀರಿನ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಹಣವನ್ನು ನೀಡಿದೆ. ಸರ್ಕಾರ 570 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ಹೇಳಿದರು.
ಜಲ ಮೂಲವಿಲ್ಲದೆ ಯೋಜನೆಗೆ ಕೇಂದ್ರವು ಒಪ್ಪುವುದಿಲ್ಲ. ವಿವರವಾದ ಯೋಜನಾ ವರದಿ ಮತ್ತು ನೀರಿನ ಮೂಲವಿಲ್ಲದೆ ಕೆಲಸ ಸಾಧ್ಯವಿಲ್ಲ. ಜಲ ಜೀವನ್ ಮಿಷನ್ ಯೋಜನೆಯನ್ನು ಪೂರ್ಣಗೊಳಿಸಲು ಕನಿಷ್ಠ ಎರಡು ವರ್ಷಗಳು ಬೇಕಾಗುತ್ತದೆ, ಯೋಜನೆಗಾಗಿ ಕೇಂದ್ರದಿಂದ 570 ಕೋಟಿ ರೂ.ಗಳನ್ನು ಕೇಳಲಾಗಿತ್ತು. ಆದರೆ, ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಹಣವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.