ಬೆಂಗಳೂರು: SCSP/TSP ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿದೆ ಎಂಬ ವಿಚಾರ ವಿಧಾನಪರಿಷತ್ತಿನಲ್ಲಿ ಶುಕ್ರವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು.
ಎಸ್ಸಿಎಸ್ಪಿ ಹಾಗೂ ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಈ ಮೂಲಕ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಆಡ್ಡಿಯಾಗಿದೆ. ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸದಸ್ಯರಾದ ಹೇಮಲತಾ ನಾಯಕ್ ಹಾಗೂ ಶರವಣ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರು, ಗ್ಯಾರಂಟಿ ಯೋಜನೆಗಳಿಗೆ ಈ ಹಣವನ್ನು ಬಳಸಲಾಗಿಲ್ಲ. ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುವುದಿಲ್ಲ. ಮೀಸಲಿಟ್ಟ ಹಣವನ್ನು ಆ ಸಮುದಾಯದ ಜನರಿಗೆ ಮಾತ್ರ ಬಳಸಲಾಗಿದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ದಲಿತರಿಗೆ ಈ ಸರ್ಕಾರದಿಂದ ಆಗಿರುವಷ್ಟು ಅನ್ಯಾಯ ಬೇರೆ ಎಲ್ಲಿಯೂ ಆಗಿಲ್ಲ. ನಮಗೆ ಮೋಸ ಮಾಡಲು ನಮ್ಮ ಜನಾಂಗದ ವ್ಯಕ್ತಿಯನ್ನೇ ಇಡಲಾಗಿದೆ. ಇದು ನಮಗೆ ಮಾಡುತ್ತಿರುವ ವಂಚನೆ. ನಮ್ಮ ಹಣವನ್ನು ನಮಗೆ ವಾಪಸ್ ಕೊಡಿಸಿ ಗ್ಯಾರಂಟಿಗಳಿಗೂ ನಮ್ಮ ಹಣವನ್ನೇ ಬಳಸಿಕೊಳ್ಳಲಾಗುತ್ತಿದೆ ಸಚಿವರು ಅನ್ಯ ಯೋಜನೆಗಳಿಗೆ ಕೊಡಲು ಬಿಡುವುದಿಲ್ಲ ಎಂದಿದ್ದಾರೆ.
ಸಚಿವರ ಹೇಳಿಕೆ ಸಂತಸ ತಂದಿದೆ. ಎಸ್‌ಸಿ ಎಸ್‌ಟಿ ಸಬ್ ಪ್ಲಾನ್ ನಿಮ್ಮ ಪಕ್ಷದ ಪ್ರಣಾಳಿಕೆ ಅಷ್ಟೇ. ನೀವು ಮಾಡಿರುವುದು ಸಬ್ ಪ್ಲಾನ್ ಅಲ್ಲ. ಇಲ್ಲಿ ಬಹಳ ದುರುಪಯೋಗ ಆಗುತ್ತಿದೆ. ಎಸ್‌ಸಿ, ಎಸ್‌ಟಿ ಜನರು ಬೊಬ್ಬೆ ಹೊಡೆಯುತ್ತಿದ್ದಾರೆ. ಇವರಿಗಾಗಿ 42 ಸಾವಿರ ಕೋಟಿ ಇಟ್ಟಿದ್ದಾರೆ. ವಿವಿಧ ಇಲಾಖೆಗಳಿಗೆ 21 ಸಾವಿರ ಕೋಟಿ, ಹಾಗೂ ಗ್ಯಾರಂಟಿ ಯೋಜನೆಗಳಿಗೆ 14 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಬಾಕಿ ಉಳಿದಿರುವುದು 7 ಸಾವಿರ ಕೋಟಿ ಮಾತ್ರ. ದಲಿತರಿಗೆ ಈ ಸರ್ಕಾರ ಮಾಡಿದಷ್ಟು ಅನ್ಯಾಯ ಬೇರೆ ಸರ್ಕಾರ ಮಾಡಿಲ್ಲ. ಎಸ್‌ಸಿ, ಎಸ್‌ಟಿಗಳಿಗೆ ಅನ್ಯಾಯ ಆಗುತ್ತಿದೆ. ಎಸ್‌ಸಿಪಿ, ಟಿಎಸ್‌ಪಿ ಹಣ ಗ್ಯಾರಂಟಿಗೆ ಕೊಡುವುದು ನಿಲ್ಲಿಸಬೇಕು. ನಿಲ್ಲಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.