ಬೆಂಗಳೂರು, ಮಾರ್ಚ್ 13: ಕರ್ನಾಟಕ ರಾಜಕಾರಣದಲ್ಲಿ, ಅದರಲ್ಲೂ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakuamr) ಮಧ್ಯೆ ಕಳೆದ ಕೆಲವು ದಿನಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಜೆಟ್ ವೇಳೆಗೆ ಎಲ್ಲವೂ ತುಸು ತಣ್ಣಗಾಗಿದ್ದರೂ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸದನದಲ್ಲೇ ಸಿದ್ದರಾಮಯ್ಯ ಹೇಳಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದೇ ಹೊತ್ತಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಶಾಸಕರಿಗೆ ಔತಣಕೂಟ ಆಯೋಜನೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರು ನಗರದ ಖಾಸಗಿ ಹೊಟೇಲ್ನಲ್ಲಿ ಎಲ್ಲಾ ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡುವೆಯೂ ಡಿಕೆ ಶಿವಕುಮಾರ್ ಔತಣಕೂಟ ಸಾಹಸಕ್ಕೆ ಕೈಹಾಕಿದ್ದು ಭಾರಿ ಮಹತ್ವ ಪಡೆದಿದೆ.
ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದನ್ನೇ ನೆಪವಾಗಿಟ್ಟುಕೊಂಡು ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಅವರು ಮಾರ್ಚ್ 11 ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ್ದಾರೆ. ಇಷ್ಟೇ ಅಲ್ಲದೆ, ಪ್ರತಿ ಅಧಿವೇಶನ ಸಂದರ್ಭದಲ್ಲಿಯೂ ಡಿಕೆ ಶಿವಕುಮಾರ್ ಶಾಸಕರಿಗೆ ಡಿನ್ನರ್ ಆಯೋಜನೆ ಮಾಡುತ್ತಿದ್ದಾರೆ.