ಇಸ್ಲಾಮಾಬಾದ್: ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್ ಮಾಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್ಎ) ಇದೀಗ ನೇರವಾಗಿ ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದಲ್ಲಿ ರೈಲು ಅಪಹರಣದ ಸುದ್ದಿ ವ್ಯಾಪಕ ಚರ್ಚೆಗೆ ಗ್ರಸಾವಾಗುತ್ತಿದ್ದು, ಈ ವರೆಗೂ ಪಾಕಿಸ್ತಾನ ಸೇನೆ 150 ಒತ್ತೆಯಾಳುಗಳನ್ನು ರಕ್ಷಣೆ ಮಾಡಿದೆ. ಅಂತೆಯೇ ರೈಲು ಹೈಜಾಕ್ ಮಾಡಿದ್ದ ಬಿಎಲ್ಎ ಬಂಡುಕೋರರ ಪೈಕಿ 27 ಮಂದಿಯನ್ನು ಕಾರ್ಯಾಚರಣೆಯಲ್ಲಿ ಕೊಂದು ಹಾಕಿದೆ. ಇನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್ಎ) ವಿಭಾಗವಾದ ಮಜೀದ್ ಬ್ರಿಗೇಡ್ ಈ ಅಪಹರಣದ ಹೊಣೆಯನ್ನು ಹೊತ್ತುಕೊಂಡಿದೆ.
ಅಂದಹಾಗೆ ಈ ಮಜೀದ್ ಬ್ರಿಗೇಡ್ ಬಿಎಲ್ಎಯ ಆತ್ಮಹತ್ಯಾ ದಾಳಿ ಘಟಕವಾಗಿದ್ದು, ಈಗಾಗಲೇ ಪಾಕಿಸ್ತಾನದಾದ್ಯಂತ ಈ ಘಟಕ ಹಲವು ಆತ್ಮಹತ್ಯಾ ದಾಳಿಗಳನ್ನು ನಡೆಸಿದೆ. ಮಾತ್ರವಲ್ಲದೇ ಇದೇ ಮಜೀದ್ ಘಟಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ.