ಬೆಂಗಳೂರು, ಮಾರ್ಚ್ 11: ಸಿಎಂ ಸಿದ್ದರಾಮಯ್ಯ (Siddaramaiah) ಮಂಡಿಸಿದ 16ನೇ ಬಜೆಟ್ ವಿರುದ್ಧ ಬಿಜೆಪಿ ಸಮರ ಸಾರಿದೆ. ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದ್ದಕ್ಕೆ ಆಕ್ರೋಶ ಹೊರಹಾಕುತ್ತಿದೆ. ಸರ್ಕಾರ ಎಸ್ಸಿ, ಎಸ್ಟಿ ಹಣವನ್ನು ನುಂಗಿಹಾಕಿದೆ ಎಂದು ಬೀದಿ ಹೋರಾಟ ಮಾಡುತ್ತಿದೆ. ಆದರೆ, ಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ (Congress) ಮುಂದಾಗಿದೆ. ಸೋಮವಾರ ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿಗೆ ತಕ್ಕ ಎದುರೇಟು ನೀಡಲು ನಿರ್ಧರಿಸಲಾಗಿದೆ. ‘ಕೈ’ ಶಾಸಕರಿಗೆ ಸಿದ್ದರಾಮಯ್ಯ ಖಡಕ್ ಸಲಹೆಗಳನ್ನು ಕೊಟ್ಟಿದ್ದಾರೆ.
ಎಸ್ಸಿ-ಎಸ್ಪಿ-ಟಿಎಸ್ಪಿ ಕಾಯ್ದೆ ಮಾಡಿರುವ ರಾಜ್ಯ ನಮ್ಮದು . ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಾಗಿಲ್ಲ. ಶಾಸಕರಾದ ನೀವು ವಿವರಿಸಿ ಜನರಿಗೆ ತಿಳಿಯುವಂತೆ ಮಾಡಬೇಕು. ಹಿಂದಿನ ಸರ್ಕಾರದ ಎಡವಟ್ಟಿನಿಂದ ಬಿಲ್ ಬಾಕಿ ಉಳಿದಿದೆ. ಇದೀಗ ನಮ್ಮ ಸರ್ಕಾರ ಹಂತ ಹಂತವಾಗಿ ಬಿಲ್ ಪಾವತಿಸುತ್ತಿದೆ. ಅಷ್ಟೇ ಅಲ್ಲ ಗ್ಯಾರಂಟಿಯಿಂದ ಅಭಿವೃದ್ಧಿಯಾಗಿಲ್ಲ ಎಂಬ ಬಿಜೆಪಿ ಆರೋಪ ಶುದ್ಧ ಸುಳ್ಳಾಗಿದೆ. ಯಾಕಂದರೆ, ಒಟ್ಟು ರಾಜ್ಯ ದೇಶೀಯ ಉತ್ಪನ್ನ ಶೇ 7.4 ಬೆಳವಣಿಗೆಯಾಗಿದೆ. ದೇಶದ GSDP 6.4 ಗಿಂತ ನಾವು ಪ್ರಗತಿ ಸಾಧಿಸಿದ್ದೇವೆ. ಇನ್ನು GST ಸಂಗ್ರಹದಲ್ಲಿ ದೇಶದಲ್ಲೇ ಕಾಂಗ್ರೆಸ್ 2ನೇ ಸ್ಥಾನದಲ್ಲಿದೆ. FDI ನಲ್ಲಿ ನಮ್ಮ ರಾಜ್ಯ ದೇಶದಲ್ಲೇ ನಂಬರ್ ಒನ್ ಇದೆ. ಹಾಗಾಗಿ ಬಜೆಟ್ ಪುಸ್ತಕ ಓದಿಕೊಂಡು ಅಧಿವೇಶನದಲ್ಲಿ ಪರಿಣಾಮಕಾರಿಯಾಗಿ ಬಿಜೆಪಿ ವಿರುದ್ಧ ಮಾತನಾಡಿ ಎಂದು ಸಿಎಂ ಶಾಸಕರಿಗೆ ಸಲಹೆ ನೀಡಿದ್ದಾರೆ.