ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಭಾರೀ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದು, ದೊಡ್ಡ ಮಟ್ಟದ ಸೈಬರ್ ದಾಳಿಯಿಂದಾಗಿ ಈ ರೀತಿ ಆಗಿದೆ ಎಂದು ಎಕ್ಸ್ ಮಾಲೀಕ ಎಲಾನ್ ಮಸ್ಕ್ ಅವರು ಹೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಎಕ್ಸ್’ ಮೇಲೆ ಉದ್ದೇಶಪೂರ್ವಕ ಸೈಬರ್ ದಾಳಿ ನಡೆದಿದ್ದು, ಸಂಘಟಿತ ಗುಂಪು ಅಥವಾ ವಿರೋಧಿ ರಾಷ್ಟ್ರವೇ ಇದರ ಹಿಂದೆ ಇರಬಹುದು,ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
“X ವಿರುದ್ಧ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿದೆ. ಪ್ರತಿದಿನ ಇಂತಹ ದಾಳಿಗಳು ಸಾಮಾನ್ಯವಾದರೂ, ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಸೈಬರ್ ದಾಳಿ ನಡೆಸಲಾಗಿದೆ. ಒಂದು ದೊಡ್ಡ ಸಂಘಟಿತ ಗುಂಪು ಅಥವಾ ಯಾವುದೋ ವಿರೋಧಿ ದೇಶ ಈ ಷಡ್ಯಂತ್ರದಲ್ಲಿ ಭಾಗಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ದಾಳಿಯ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಸೋಮವಾರ ಜಗತ್ತಿನ ಬಹುತೇಕ ಪ್ರದೇಶಗಳಲ್ಲಿ ತಾಂತ್ರಿಕ ಸಮಸ್ಯೆಗೆ ತುತ್ತಾಗಿತ್ತು. ಸರ್ವರ್ ಡೌನ್ ಕಾರಣ ಲಾಗಿನ್ ಆಗುವುದು ಸೇರಿದಂತೆ ಟ್ವಿಟರ್ ಬಳಕೆ ನಿಧಾನವಾಗಿತ್ತು. ನಂತರ ಕೆಲವೇ ಗಂಟೆಗಳಲ್ಲಿ ಈ ಸಮಸ್ಯೆ ಪರಿಹಾರವಾಯಿತು. ಆದರೂ ಜನ ಮಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಸರಿ ಮಾಡುತ್ತೇನೆ ಎನ್ನುವ ಮಸ್ಕ್ ಗೆ ಟ್ವಿಟರ್ ಸರಿಮಾಡಲಾಗುತ್ತಿಲ್ಲ ಎಂದು ಟೀಕಿಸಿದ್ದರು.
ಡೌನ್ಡೆಟೆಕ್ಟರ್ ಪ್ರಕಾರ ಎಕ್ಸ್ ಸಾಮಾಜಿಕ ಜಾಲತಾಣವು ದಿನವಿಡೀ ಮೂರು ಬಾರಿ ಸ್ಥಗಿತಗೊಂಡಿದೆ. ಭಾರತೀಯ ಬಳಕೆದಾರರಿಂದ ಸುಮಾರು 2,200 ದೂರುಗಳು ಕೂಡ ದಾಖಲಾಗಿವೆ. ಮಧ್ಯಾಹ್ನ ಆರಂಭವಾದ ತಾಂತ್ರಿಕ ತೊಂದರೆ ದಿನವೀಡಿ ಕಂಡುಬಂದಿದೆ.