ರಾಜ್ಯದ ಪ್ರಗತಿಗೆ ಪೂರಕ ಬಜೆಟ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ರಾಜ್ಯದ ಪ್ರಗತಿಗೆ ಪೂರಕ ಬಜೆಟ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
•  *ಮಹಿಳೆಯರ- ಮಕ್ಕಳ ಅಭ್ಯುದಯಕ್ಕೆ ಆದ್ಯತೆ*
*• ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಹಾಯಧನೆ ಹೆಚ್ಚಳ*
*ಬೆಂಗಳೂರು* : ರಾಜ್ಯದ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2025-2026ನೇ ಸಾಲಿನ ಬಜೆಟ್ ಜನಪರವಾಗಿದ್ದು, ರಾಜ್ಯದ ಪ್ರಗತಿಗೆ ಪೂರಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬಜೆಟ್ ನಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 94,084 ಕೋಟಿ ರೂಪಾಯಿ ಒದಗಿಸಲಾಗಿದೆ. ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ಒಟ್ಟು 62,033 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
*• ಗೃಹಲಕ್ಷ್ಮೀಗೆ ಹಣ ನಿಗದಿ*
ಮಹಿಳೆಯರ ಆರ್ಥಿಕ ಸಬಲೀಕರಣದ ಹಿನ್ನೆಲೆಯಲ್ಲಿ  ಕುಟುಂಬ ನಿರ್ವಹಣೆಗೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡುವ ಗೃಹಲಕ್ಷ್ಮೀ ಯೋಜನೆಗೆ ನಿರೀಕ್ಷೆಯಂತೆ ಹಣ ಕಾಯ್ದಿರಿಸಲಾಗಿದೆ.  ಈ ಯೋಜನೆಗೆ ಈ ವರ್ಷ 28,608 ಕೋಟಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
*• ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಪರ ಕಾಳಜಿ*
ರಾಜ್ಯದಲ್ಲಿ ಅಂಗನವಾಡಿ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿರುವ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳ ಮಾಡುವುದು ನಿಜಕ್ಕೂ ಹರ್ಷದ ಸಂಗತಿ. ರಾಜ್ಯದ 37 ಲಕ್ಷ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ತಿಂಗಳಿಗೆ 1 ಸಾವಿರ ರೂಪಾಯಿ ಹಾಗೂ ಸಹಾಯಕಿಯರ ಗೌರವಧನ 750 ಹೆಚ್ಚಿಸಲಾಗಿದೆ. ಈ ಮೂಲಕ ಆ ವರ್ಗದವರ ಅಭ್ಯುದಯಕ್ಕೆ ಸಹಾಯವಾಗಲಿದ್ದು, ಇದು ಮುಖ್ಯಮಂತ್ರಿಯವರ ಜನಪರ ಕಾಳಜಿ ಎತ್ತಿ ತೋರಿಸಿದೆ ಎಂದು ತಿಳಿಸಿದ್ದಾರೆ.
*• ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಸೂಕ್ತ*
ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲು ತಲಾ ಒಂದು ಲಕ್ಷ ರೂಪಾಯಿಯಂತೆ ಒಟ್ಟು 175 ಕೋಟಿ ರೂಪಾಯಿ ಒದಗಿಸಿರುವುದು ಅನುಕೂಲಕರವಾಗಿದೆ. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಖರೀದಿಸಲು 10 ಕೋಟಿ ರೂಪಾಯಿ ಮೀಸಲಿರಿಸಿರುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
*• ಬೆಳಗಾವಿ-ಮೈಸೂರು ವಿಶೇಷ ಮಕ್ಕಳ ವಸತಿ ಶಾಲೆ ಮೇಲ್ದರ್ಜೆ*
ನಮ್ಮ ಮುಖ್ಯಮಂತ್ರಿಯವರು ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ತಲಾ 5 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.  ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು. ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಿರುವುದು ಉತ್ತಮ ಬೆಳೆವಣೆಗೆ ಆಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟರೆ ಎಲ್ಲ ಇಲಾಖೆಗಳಿಗೂ ಆದ್ಯತೆಯ ಮೇಲೆ ಅನುದಾನ ಹಂಚಿಕೆ ಮಾಡುವ ಮೂಲಕ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article