ಬೆಂಗಳೂರು, ಮಾರ್ಚ್ 6: ಕರ್ನಾಟಕ ಹೈಕೋರ್ಟ್ ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕುಣಿಗಲ್ ಮೂಲದ ವಿಜೇತ್, ಲೋಹಿತ್ ಆಗಿದ್ದಾರೆ. ಆರೋಪಿಗಳು ಹೈಕೋರ್ಟ್ ನೀಡುವ ಆದೇಶದ ಪ್ರತಿಯನ್ನೇ ಹೋಲುವ ನಕಲಿ ಆದೇಶ ಪ್ರತಿ ತಯಾರಿಸುತ್ತಿದ್ದರು. ಅದನ್ನು ಬಳಸಿಕೊಂಡು ಅನೇಕರನ್ನು ವಂಚಿಸಿದ್ದರು. ಒಬ್ಬ ಆರೋಪಿಯಂತೂ, ತನ್ನ ಗರ್ಲ್ ಫ್ರೆಂಡನ್ನೇ ವಂಚಿಸಿದ್ದ ಎಂಬುದು ಗೊತ್ತಾಗಿದೆ.
ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, ಹೈಕೋರ್ಟ್ ಈ ತಮ್ಮ ಪರ ತೀರ್ಪು ನೀಡಿದ್ದು, ಸೀಜ್ ಮಾಡಿದ ಹಣವನ್ನು ಜಾರಿ ನಿರ್ದೇಶನಾಲಯ ನಮಗೆ ನೀಡಬೇಕಿದೆ. ಆ ಹಣವನ್ನು ಬಿಡಿಸಿಕೊಳ್ಳಲು ಸ್ವಲ್ಪ ಹಣ ಬೇಕಾಗಿದೆ. ಮೊತ್ತ ಕೈಸೇರಿದ ಕೂಡಲೇ ಹಿಂದಿರುಗಿಸುವುದಾಗಿ ಆರೋಪಿಗಳು ಜನರನ್ನು ವಂಚಿಸುತ್ತಿದ್ದರು. ಹೈಕೋರ್ಟ್ ಆದೇಶವನ್ನೇ ಹೋಲುವ ನಕಲಿ ಪ್ರತಿ ತಯಾರಿಸಿ ಜನರಲ್ಲಿ ನಂಬಿಕೆ ಬರುವಂತೆ ಮಾಡಿ ಹಣ ಪೀಕುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.