ಅಥಣಿ: ಶಾಲಾ ಮಕ್ಕಳ ದಿನ ಬಳಕೆಗಾಗಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್’ವೊಂದು ಇದ್ದಕ್ಕಿದ್ದಂತೆ ಕುಸಿತು ಬಿದಿದ್ದು, ಎದುರಾಗಬೇಕಿದ್ದ ಭಾರೀ ಅನಾಹುತವೊಂದು ಕ್ಷಣಾರ್ಧದಲ್ಲಿ ತಪ್ಪಿದಂತಾಗಿದೆ.
ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಎಲ್ಐಸಿ ಸಂಸ್ಥೆಯ ಸಹಾಯಧನದಿಂದ ನಿರ್ಮಿಸಲಾದ ನೀರಿನ ಘಟಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಆದರೆ, ಅದೃಷ್ಟವಶಾತ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಯಾವುದೇ ಗಾಯಗಳು ಅಥವಾ ಸಾವುನೋವುಗಳು ಸಂಭವಿಸಿಲ್ಲ.
ಬೆಳಿಗ್ಗೆ 11:30ಕ್ಕೆ ಈ ಘಟನೆ ನಡೆದಿದ್ದು, ನೀರಿನ ಟ್ಯಾಂಕ್ ಬಳಿ ವಿದ್ಯಾರ್ಥಿಗಳು ಇಲ್ಲದ ಕಾರಣ ಯಾವುದೆ ಅವಘಡ ಸಂಭವಿಸಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಟ್ಯಾಂಕ್ ಕುಸಿತಕ್ಕೆ ಕಾರಣ ಪತ್ತೆಗೆ ನಿರ್ಮಾಣ ಹಾಗೂ ನಿರ್ವಹಣಾ ಮಾನದಂಡಗಳನ್ನು ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏತನ್ಮಧ್ಯೆ, ಶಾಲೆಯ ಸ್ಥಳೀಯ ಅಧಿಕಾರಿಗಳು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೋಷಕರು ಮತ್ತು ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಕೆಳದರ್ಜೆಯ ನಿರ್ಮಾಣ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವು ಘಟನೆಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಕಳಪೆ-ಗುಣಮಟ್ಟದ ವಸ್ತುಗಳು ಮತ್ತು ಅಸಮರ್ಪಕ ನಿರ್ವಹಣೆ ಟ್ಯಾಂಕ್ ಅನ್ನು ದುರ್ಬಲಗೊಳಿಸಿರಬಹುದೆಂದು ವರದಿಗಳು ತಿಳಿಸಿವೆ.