ಬೆಂಗಳೂರು: ‘ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ-2024’ ಮತ್ತು ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ- 2024′ ಅನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗುರುವಾರ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಜೊತೆಗೆ ಸ್ಪಷ್ಟನೆಯನ್ನೂ ಕೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2024’ ಅನ್ನು ಸಹಿ ಹಾಕದೆ ಹಿಂದೆ ವಾಪಸ್ ಕಳುಹಿಸಿದ್ದ ರಾಜ್ಯಪಾಲರು ಇದೀಗ ಮತ್ತೆರಡು ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಮುಂದುವರಿದಂತಾಗಿದೆ.
ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಹಲವು ಆಕ್ಷೇಪಗಳನ್ನು ಮಾಡಿದ್ದಾರೆ. ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ಬಗ್ಗೆ ಸರ್ಕಾರವು ತಿದ್ದುಪಡಿ ಮಾಡಿತ್ತು. ಆದರೆ ಈ ತಿದ್ದುಪಡಿಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾಮನಿರ್ದೇಶಿತರಿಗೆ ಮತದಾನದ ಹಕ್ಕುಗಳನ್ನು ನೀಡಿದರೆ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದುಕೊಳ್ಳಲಾಗುತ್ತದೆ. ಇದು ಸಹಕಾರಿ ಕ್ಷೇತ್ರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹೆಜ್ಜೆಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ – 2024 ಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯಪಾಲರು, ಸೌಹಾರ್ದ ಸಹಕಾರಿ ಮಸೂದೆಗೆ ಸಂಬಂಧಿಸಿದಂತೆ, ಅಧಿಕಾರಿಗಳು ನೀಡಿದ ಸ್ಪಷ್ಟನೆಗಳು ತೃಪ್ತಿಕರವಾಗಿಲ್ಲ. ಎಲ್ಲ ಸುಸ್ತಿದಾರರಿಗೆ ಮತದಾನದ ಹಕ್ಕು ನೀಡುವ ಬದಲು, ಅವರು ಮತದಾನ ಮಾಡದಂತೆ ತಡೆಯಲು ಸರಿಯಾದ ವಿಧಾನವನ್ನು ಜಾರಿಗೆ ತರಬೇಕು’ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.