ಬೆಂಗಳೂರು: ರಾಜ್ಯ ಬಜೆಟ್ ಮೇಲಿನ ಚರ್ಚೆಗೆ ಕೇವಲ 15 ದಿನಗಳನ್ನು ನಿಗದಿಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿವೆ.
ವಿವಿಧ ಇಲಾಖೆಗಳ ಸಮಗ್ರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸೂಕ್ಷ್ಮವಾದ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಾರ್ಚ್ ಮೂರರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಅಧಿವೇಶನದ ಮೊದಲ ದಿನ ಮಾರ್ಚ್ 3ರಂದು ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ರಾಜ್ಯಪಾಲರ ಭಾಷಣದ ಮೇಲೆ ಸದನದಲ್ಲಿ ಮೂರು ದಿನ ಚರ್ಚೆ ನಡೆಯಲಿದೆ. ನಂತರ ಮಾರ್ಚ್ 7 ರಂದು ವಿಧಾನಸಭೆಯಲ್ಲಿ ಈ ಸಾಲಿನ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿದ್ದಾರೆ. ಶನಿವಾರ ಹಾಗೂ ಭಾನುವಾರ ಹೊರತು ಪಡಿಸಿ 14 ದಿನ ಬಜೆಟ್ ಅಧಿವೇಶನದ ಕಲಾಪಗಳು ನಡೆಯಲಿವೆ. ಬಜೆಟ್ ಮೇಲಿನ ಚರ್ಚೆಗೆ ಕೇವಲ 14 ದಿನಗಳ ಮಾತ್ರ ಉಳಿಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಕಿಡಿಕಾರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ವಿಧಾನಮಂಡಲ ಅಧಿವೇಶನಗಳನ್ನು ಸೂಕ್ತ ರೀತಿಯಲ್ಲಿ ನಡೆಸುವ ಉದ್ದೇಶ ಸರ್ಕಾರಕ್ಕಿಲ್ಲ. ಬೆಂಗಳೂರು ನಗರ ಒಂದಕ್ಕೇ 2-3 ದಿನಗಳ ಚರ್ಚೆಯ ಅಗತ್ಯವಿದೆ. ಬೆಳಗಾವಿ, ಇತರೆ ಜಿಲ್ಲೆಗಳ ಸಮಸ್ಯೆಗಳು ಸಾಕಷ್ಟವಿದೆ. ಅದಕ್ಕೆ ಸಮಯವಿಲ್ಲ. ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಏನು ಮಾತನಾಡುತ್ತಾರೆ? ಹೀಗಾಗಿ ಹೆಚ್ಚಿನ ದಿನ ಅಧಿವೇಶನಕ್ಕೆ ಮೀಸಲಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.