ಬೆಂಗಳೂರು, ಫೆಬ್ರವರಿ 24: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7 ರಂದು 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. “ಎರಡನೇ ಬಾರಿಗೆ ಹಾಲು ಮತ್ತು ವಿದ್ಯುತ್ ದರ ಏರಿಕೆಗೆ ಸರ್ಕಾರ ಚರ್ಚೆ ಆರಂಭಿಸಿರುವುದನ್ನು ವಿರೋಧಿಸುತ್ತೇನೆ. ದರ ನಿಗದಿ ಆಯೋಗಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯದೇ ಇದ್ದಲ್ಲಿ ಮೆಟ್ರೋ ದರ ಏರಿಕೆ ಸಂದರ್ಭವೇ ಬರುತ್ತಿರಲಿಲ್ಲ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಬಹಿರಂಗ ಪತ್ರ

“ಈ ಬಾರಿಯ ಬಜೆಟ್ನಲ್ಲಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ. ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರ ಬಾಕಿ ಪಾವತಿಸಲಾಗದ ದಾರುಣ ಸ್ಥಿತಿಗೆ ಕರ್ನಾಟಕವನ್ನು ತಂದು ನಿಲ್ಲಿಸಿದ ಅಪಕೀರ್ತಿಗೆ ತಾವು ಗುರಿಯಾಗಬಾರದು. 16ನೇ ಬಜೆಟ್ನಲ್ಲಿ ಕರ್ನಾಟಕಕ್ಕೆ ಆರ್ಥಿಕವಾಗಿ ಜವಾಬ್ದಾರಿಯುತ, ಅಭಿವೃದ್ಧಿ ಆಧಾರಿತ ಮಾರ್ಗಸೂಚಿ ಮಂಡಿಸಲು ಒಂದು ಅವಕಾಶವಿದೆ ತಾವು ಮಂಡಿಸಲಿರುವ ಬಜೆಟ್ ಈ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.