ಅಮ್ರೋಹಾ (ಉತ್ತರ ಪ್ರದೇಶ): ವ್ಯಕ್ತಿಯೊಬ್ಬರ ಪುಣ್ಯತಿಥಿಯ ದಿನದಂದು ಕ್ಯಾರೆಟ್ ಹಲ್ವಾ ಸೇವಿಸಿ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಹೊರತು ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅಮ್ರೋಹಾ ಜಿಲ್ಲೆಯ ದಿದೌಲಿ ಗ್ರಾಮದ ನಿವಾಸಿ ಕುಲದೀಪ್ ಗುಪ್ತಾ ಎಂಬುವರು ತಮ್ಮ ತಂದೆಯ ಪುಣ್ಯತಿಥಿಯ ನಿಮಿತ್ತವಾಗಿ ಶುಕ್ರವಾರ ಔತಣಕೂಟ ಆಯೋಜಿಸಿದ್ದರು. ಕ್ಯಾರೆಟ್ ಹಲ್ವಾ ಸೇರಿದಂತೆ ಹಲವು ತಿನಿಸುಗಳನ್ನು ಪುಣ್ಯತಿಥಿಯಲ್ಲಿ ಮಾಡಿಸಿದ್ದರು. ಗ್ರಾಮಸ್ಥರೆಲ್ಲರೂ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಕ್ಯಾರೆಟ್ ಹಲ್ವಾ ತಿಂದ ನಂತರ 100ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು ಮತ್ತು ತಲೆತಿರುಗುವಿಕೆ ಕಂಡು ಬಂದಿದ್ದು, ತಕ್ಷಣ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೇವಿಸಲು ಯೋಗ್ಯವಲ್ಲ ಹಾಲು ಮತ್ತು ಮಾವಾದಿಂದ ಕ್ಯಾರೆಟ್ ಹಲ್ವಾವನ್ನು ತಯಾರಿಸಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಘಟನೆಗೆ ಇದೇ ಪ್ರಮುಖ ಕಾರಣವಲ್ಲ. ಕ್ಯಾರೆಟ್ ಹಲ್ವಾ ವಿಷ ಪದಾರ್ಥವಾಗಿ ಪರಿವರ್ತನೆಯಾಗಿರುವ ಸಾಧ್ಯತೆ ಇದ್ದುದರಿಂದ ಇದನ್ನು ಸೇವಿಸಿದ ಹಲವರ ಆರೋಗ್ಯದಲ್ಲಿ ಏರುಪೇರಾಗಿರಬಹುದು. ಕೆಲವರಲ್ಲಿ ವಾಂತಿ, ಹೊಟ್ಟೆ ನೋವು ಮತ್ತು ತಲೆತಿರುಗುವಿಕೆ ಕೂಡ ಕಂಡು ಬಂದಿದೆ. ಪ್ರಸ್ತುತ, ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.