ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಈಗಾಗಲೇ ಕೈಗಾರಿಕಾ ನೀತಿ 2025-30 ಜಾರಿಗೊಳಿಸಲಾಗಿದೆ. ಇದಕ್ಕೆ ಅನುಮೋದನೆ ನೀಡುವ ಜೊತೆಗೆ ಸಾಕಷ್ಟು ಯೋಜನೆಗಳಿಗೆ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಐಐಐಟಿ-ಬೆಂಗಳೂರಿನಲ್ಲಿ ಮೂಲಸೌಕರ್ಯ ವಿಸ್ತರಣೆ ಅನುದಾನ ಪೂರೈಕೆ ಒಳಗೊಂಡಂತೆ ವಿವಿಧ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೆ ತರಲು ಅನುಮೋದನೆ ನೀಡಲಾಯಿತು.
ಒಂದು ವಾರದ ಹಿಂದಷ್ಟೇ ಇನ್ವೆಸ್ಟ್ ಕರ್ನಾಟಕ 2025 ಪೂರ್ಣಗೊಂಡಿದೆ. ಐಐಐಟಿ-ಬೆಂಗಳೂರು ಮೂಲ ಸೌಕರ್ಯ ಒದಗಿಸುವ ಒಟ್ಟು 817 ಕೋಟಿ ರೂ.ಯೋಜನೆಗೆ ಕರ್ನಾಟಕವು ಶೇ. 35 ರಷ್ಟು ಅಂದರೆ 285.95 ಕೋಟಿ ರೂ. ನೀಡುವುದಾಗಿ ಒಪ್ಪಿದೆ. ಇದನ್ನು ಮುಂದಿನ ತಿಂಗಳು ಮಂಡನೆ ಆಗಲಿರುವ ಕರ್ನಾಟಕ ಬಜೆಟ್ 2024-25ನಲ್ಲಿ ಘೋಷಿಸಲಿದೆ. ಬಾಕಿ ಮೊತ್ತವನ್ನು ಏಳು ವರ್ಷಗಳಲ್ಲಿ ನೀಡಲು ಸರ್ಕಾರ, ಸಂಪುಟವು ತೀರ್ಮಾನಿಸಿದೆ. ಬಾಕಿ ಹಣ ವಿವಿಧ ಮೂಲಗಳಿಂದ ಐಐಐಟಿ ಬೆಂಗಳೂರು ಪಡೆದುಕೊಳ್ಳಲು ಮುಂದಾಗಿದೆ ಎಂದು TNIE ವರದಿ ಮಾಡಿದೆ.