ಮೈಸೂರು, ಫೆಬ್ರವರಿ 20: ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಗಲಾಟೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೌಲ್ವಿ ಮುಫ್ತಿ ಮುಸ್ತಾಕ್ ನನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಗುರುವಾರ ಮೌಲ್ವಿ ಮುಫ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ, ಗಲಾಟೆ ನಡೆದು 11 ದಿನಗಳ ಬಳಿಕ ಆರೋಪಿ ಮೌಲ್ವಿಯನ್ನು ಬಂಧಿಸಿದಂತಾಗಿದೆ.
ಕಲ್ಲು ತೂರಾಟ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸದೇ ಇರುವ ಸರ್ಕಾರದ ನಡೆಯನ್ನು ಖಂಡಿಸಿದ್ದ ಬಿಜೆಪಿ ನಾಯಕ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ತಾಲಿಬಾನಿಗೆ ಹೋಲಿಸಿದ್ದರು. ಮುಸ್ಲಿಮರು ಭದ್ರತೆ ಕೇಳಿದರೆ ಸರ್ಕಾರ ನೀಡಲಿ, ಯಾರು ಬೇಡವೆನ್ನುತ್ತಾರೆ? ಅದರೆ ಅವರು ದುಷ್ಕೃತ್ಯ ಎಸಗಿದಾಗ ಬಂಧಿಸಿ ದಂಡಿಸುವುದನ್ನು ಬಿಟ್ಟು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅವರನ್ನು ತಡೆಯುವುದು ಹೇಗೆ? ಅವರಿಗೆ ಹೆದರಿ ಹಿಂದೂಗಳು ಮನೆ ಬಿಟ್ಟು ಬೇರೆ ಕಡೆ ಹೋಗಬೇಕೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. ಸಿಟಿ ರವಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.