ಮೊದಲ‌ ನೋಟದಲ್ಲೇ ಮೋಡಿ ಮಾಡಿದ ಅಮರ ಪ್ರೇಮಿ ಅರುಣ್ : ಬಯಲುಸೀಮೆಯ ಪ್ರೇಮಕಥೆ    

Ravi Talawar
ಮೊದಲ‌ ನೋಟದಲ್ಲೇ ಮೋಡಿ ಮಾಡಿದ ಅಮರ ಪ್ರೇಮಿ ಅರುಣ್ : ಬಯಲುಸೀಮೆಯ ಪ್ರೇಮಕಥೆ    
WhatsApp Group Join Now
Telegram Group Join Now
     ಕನ್ನಡದಲ್ಲೀಗ ಹೊಸತಂಡದಿಂದ ಹೊಸಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ ‘ಅಮರ‌ ಪ್ರೇಮಿ ಅರುಣ್’ ಸಹ ಒಂದು.
    ಸಮಾನ ಮನಸ್ಕರೆಲ್ಲಾ ಸೇರಿ ಕಟ್ಟಿರುವ ಒಲವು ಸಿನಿಮಾ ಎಂಬ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ‌ ಮಾಡಿದೆ. ಗಿರೀಶ್ ಕಾಸರವಳ್ಳಿ,‌ ಯೋಗರಾಜ್ ಭಟ್ ಸೇರಿದಂತೆ ಕನ್ನಡದ ಅನೇಕ ಹಿರಿಯ ದಿಗ್ದರ್ಶಕರ ಬಳಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಜಿ. ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚಿಗೆ  ಡಾ. ಮಂಜಮ್ಮ ಜೋಗತಿ ಹಾಗೂ ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್  ಚಿತ್ರದ ಮೊದಲ ನೋಟ ಹಾಗೂ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಡಾ. ಮಂಜಮ್ಮ ಜೋಗತಿ ಈ ಚಿತ್ರದ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
     “ಅಮರ ಪ್ರೇಮಿ ಅರುಣ್’ ಬಳ್ಳಾರಿಯಲ್ಲಿ ‌ನಡೆಯುವ ಪ್ರೇಮಕಥೆ. ಬಳ್ಳಾರಿ ಹಾಗೂ ಸುತ್ತಮುತ್ತಲಿನಲ್ಲೇ ಚಿತ್ರಕ್ಕೆ 54. ದಿನಗಳ ಚಿತ್ರೀಕರಣ ನಡೆದಿದೆ. ಸಂಭಾಷಣೆ ಕೂಡ ಬಳ್ಳಾರಿ ಭಾಷೆಯಲ್ಲೇ ಇರುತ್ತದೆ. ನಾಯಕ ಹರಿಶರ್ವಾ ಮೆಡಿಕಲ್ ರೆಪ್ ಆಗಿ ಅರುಣ್ ಎಂಬ ಪಾತ್ರದಲ್ಲಿ ಹಾಗೂ ನಾಯಕಿ ದೀಪಿಕಾ ಆರಾಧ್ಯ ಕಾವ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಧರ್ಮಣ್ಣ ಕಡೂರು ಅವರದು ಬಳ್ಳಾರಿ ಸೀನ ಎಂಬ ಪಾತ್ರ. ಕ್ರಿತಿ ಭಟ್ ಧರ್ಮಣ್ಣ ಅವರ ಜೋಡಿಯಾಗಿ ಅಭಿನಯಿಸಿದ್ದಾರೆ. ಇದೊಂದು ಕೌಟುಂಬಿಕ ಚಿತ್ರವೂ ಹೌದು. ನಾಯಕ ಹಾಗು ನಾಯಕಿಗೆ ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಇರುತ್ತಾರೆ. ಈ ಪಾತ್ರಗಳಿಗೆ ಹಿರಿಯ ಕಲಾವಿದರು ಜೀವ ತುಂಬಿದ್ದಾರೆ. ಪ್ರವೀಣ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ ಹಾಗು ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡಿ ಬಿಟ್ಸ್ ಸಂಸ್ಥೆ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ” ಎಂದು ನಿರ್ದೇಶಕ ಪ್ರವೀಣ್ ಕುಮಾರ್ ತಿಳಿಸಿದರು.
“ಕಹಿ” ಸಿನಿಮಾದಲ್ಲಿ ಅಭಿನಯಿಸಿದ್ದ ನಾನು ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಾಯಕನಾಗಿದ್ದೇನೆ. ಮುಂಚೆ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡಿದ ಅನುಭವವೇ ಹೆಚ್ಚು. ಈ ಚಿತ್ರದಲ್ಲಿ ಅರುಣ್ ನನ್ನ ಪಾತ್ರದ ಹೆಸರು. ಕಾವ್ಯ ನನ್ನ ಪ್ರೇಯಸಿಯ ಹೆಸರು. ಬಳ್ಳಾರಿ ಭಾಗದ ಕಥೆ. ಅರುಣ್ ಗೆ ಕಾವ್ಯ ಸಿಗುತ್ತಾಳಾ? ಎಂಬದೆ ಕಥೆಯ ಒಂದೆಳೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಹರಿಶರ್ವಾ,
ನಾಯಕಿ ದೀಪಿಕಾ ಆರಾಧ್ಯ, ನಟ ಧರ್ಮಣ್ಣ ಕಡೂರು, ನಟಿ‌ ಕ್ರಿತಿ ಭಟ್, ನಟಿ ರಂಜಿತ ಪುಟ್ಟಸ್ವಾಮಿ ಹಾಗೂ ಹಿರಿಯ ನಟಿ ರಾಧಾ ರಾಮಚಂದ್ರ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‘ಚಿತ್ರದಲ್ಲಿ ಆರು ಹಾಡುಗಳಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಪ್ರವೀಣ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ” ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮಾತನಾಡಿದರು.
     ಇಡೀ ಸಿನಿಮಾ ಬಳ್ಳಾರಿ ಸೊಗಡಿನ ಮಾತುಗಳಲ್ಲೇ ಇರುವ, ಬಳ್ಳಾರಿ ಸೀಮೆಯಲ್ಲಿಯೇ ಚಿತ್ರೀಕರಣ ಆಗಿರುವ ಮೊದಲ ಕನ್ನಡ ಸಿನಿಮಾ ‘ಅಮರ ಪ್ರೇಮಿ ಅರುಣ್’ ಎನ್ನುವುದು ಸಿನಿಮಾದ ತಂಡದ ಹೆಮ್ಮೆ.
WhatsApp Group Join Now
Telegram Group Join Now
Share This Article