ಬೆಂಗಳೂರು, ಫೆಬ್ರವರಿ 14: ನೀವು ಕಾಫಿ ಪ್ರಿಯರೇ? ಹಾಗಾದಾರೆ ಈ ತಿಂಗಳ ಅಂತ್ಯದ ವೇಳೆಗೆ ನಿನ್ನ ಜೇಬಿಗೆ ಅದು ಮತ್ತಷ್ಟು ಹೊರೆಯಾಗುವ ಎಲ್ಲ ಸಾಧ್ಯತೆಗಳಿವೆ. ಒಂದು ಕಪ್ ಕಾಫಿಯ ಬೆಲೆ 5 ರೂ.ಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಫಿ ಪುಡಿಯ ದರ ಹೆಚ್ಚಳವಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ವರದಿಯಾಗಿದೆ.
ರೋಸ್ಟರ್ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ. ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳ ಸದಸ್ಯರು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ.