ಕಾರವಾರ (ಉತ್ತರ ಕನ್ನಡ) : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಡುಹಕ್ಕಿ, ಪದ್ಮಶ್ರೀ ಸುಕ್ರಿ ಗೌಡ ಅವರು ಗುರುವಾರ ನಿಧನರಾಗಿದ್ದಾರೆ. ಆದರೆ ಫೆ.6 ರಂದು ತಮ್ಮ ಆರೋಗ್ಯ ವಿಚಾರಿಸಲು ಬಂದ ಅಂಕೋಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮುಂದೆ ಸುಕ್ರಜ್ಜಿ ಕೊನೆಯ ಬಾರಿ ಜಾನಪದ ಹಾಡೊಂದನ್ನು ಹಾಡಿದ್ದರು.
ಜನಪದ ಹಾಡುಗಳನ್ನು ಕಟ್ಟಿ ಹಾಡುವ ಸುಕ್ರಜ್ಜಿ ಭತ್ತಳಿಕೆಯಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳಿವೆ. ಮಾತು ಮಾತಿಗೂ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಅವರು ಸದಾ ನಗು ಮೊಗದಲ್ಲಿಯೇ ಜೀವನ ನಡೆಸಿದವರು. ಮನೆಗೆ ಬಂದವರೊಂದಿಗೆ ಆತ್ಮೀಯವಾಗಿ ಇರುತ್ತಿದ್ದ ಸುಕ್ರಜ್ಜಿಯ ಮನೆಗೆ ಫೆ.6 ರಂದು ಅಂಕೋಲಾ ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಸುಕ್ರಜ್ಜಿ ಜನಪದ ಹಾಡೊಂದನ್ನು ಅವರ ಎದುರು ಹಾಡಿದ್ದರು.
ಅಂಕೋಲಾದ ಬಡಿಗೇರಿಯಲ್ಲಿ ಸೊಸೆ, ಮೊಮ್ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ ಸುಕ್ರಜ್ಜಿ ಕೆಲಸದ ವೇಳೆಯೂ ಹಾಡುಗಳನ್ನು ಹಾಡುತ್ತಲೇ ಬಹುತೇಕ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕೆಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಗ್ಗೆ (ಫೆ.13) ಇಹಲೋಕ ತ್ಯಜಿಸಿದ್ದಾರೆ.