ಬೆಂಗಳೂರು, ಫೆಬ್ರುವರಿ 12: ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶಕ್ಕೆ ನಿರೀಕ್ಷೆಮೀರಿದ ಉತ್ಸಾಹದ ಸ್ಪಂದನೆ ಸಿಗುತ್ತಿದೆ. ಈ ಸಮಾವೇಶದಲ್ಲಿ ರಾಜ್ಯಕ್ಕೆ ಏಳೂವರೆ ಲಕ್ಷ ಕೋಟಿ ರೂ ಬಂಡವಾಳ ಸಿಗುವ ನಿರೀಕ್ಷೆ ಇತ್ತಾದರೂ, ಈಗಾಗಲೇ ಅದನ್ನು ಮೀರಿಸುವಷ್ಟು ಬಂಡವಾಳ ಹರಿದುಬರುವ ಸಾಧ್ಯತೆ ಇದೆ. ಮೊದಲ ದಿನವೇ ಮೂರು ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಂದಗಳಾಗಿರುವುದು ತಿಳಿದುಬಂದಿದೆ.
ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ; ಅಮೆರಿಕದ ಲ್ಯಾಮ್ ರಿಸರ್ಚ್ನಿಂದ 10,000 ಕೋಟಿ ರೂ ಹೂಡಿಕೆ
![ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ; ಅಮೆರಿಕದ ಲ್ಯಾಮ್ ರಿಸರ್ಚ್ನಿಂದ 10,000 ಕೋಟಿ ರೂ ಹೂಡಿಕೆ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ; ಅಮೆರಿಕದ ಲ್ಯಾಮ್ ರಿಸರ್ಚ್ನಿಂದ 10,000 ಕೋಟಿ ರೂ ಹೂಡಿಕೆ](https://hasirukranti.in/wp-content/uploads/2025/02/09-2-860x484.jpg)
ನವೀಕರಣ ಇಂಧನ ಅಭಿವೃದ್ಧಿ ನಿಗಮ (ಕೆಆರ್ಇಡಿಎಲ್) 13 ಪ್ರಮುಖ ಕಂಪನಿಗಳೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ ಪರ್ಯಾಯ ಇಂಧನ (renewable energy) ಉತ್ಪಾದನೆಗೆ ಈ ಕಂಪನಿಗಳಿಂದ 3.43 ಲಕ್ಷ ಕೋಟಿ ರೂ ಹೂಡಿಕೆ ಆಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಮತ್ತಷ್ಟು ಸೌರಶಕ್ತಿ, ವಾಯುಶಕ್ತಿ ಘಟಕಗಳು ನಿರ್ಮಾಣವಾಗಲಿವೆ. ಜೆಎಸ್ಡಬ್ಲ್ಯು ನಿಯೋ ಎನರ್ಜಿಯಿಂದ 56,000 ಕೋಟಿ ರೂ; ರಿನ್ಯೂ ಪ್ರೈ ಲಿ ಹಾಗು ಟಾಟಾ ಪವರ್ ರಿನಿವಬಲ್ ಎನರ್ಜಿ ಲಿ ಸಂಸ್ಥೆಗಳಿಂದ ತಲಾ 50,000 ಕೋಟಿ ರೂ ಹೂಡಿಕೆ ಬರಲಿದೆ.