ಬಳ್ಳಾರಿ, ಫೆ.11: ಇದೊಂದು ಅಪರೂಪದ ಘಟನೆ. ಬಳ್ಳಾರಿಯ ವಾರ್ಡ್ ಸಂಖ್ಯೆ 9ರ ವ್ಯಾಪ್ತಿಯ ರಾಜ್ಯೋತ್ಸವ ನಗರದ ಶತಾಯುಷಿ ಅಜ್ಜಿ ನಾಗಮ್ಮ ಅವರ ನೂತನ ಮನೆಯ ಗೃಹ ಪ್ರವೇಶ ಸೋಮವಾರ ನಿಗದಿ ಆಗಿತ್ತು.
ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ಅಜ್ಜಿಯ 10 × 15 ಅಳತೆಯ (1,14,900 ರೂ.ಗಳ ವೆಚ್ಚದ) ಪುಟ್ಟ ಮನೆಯನ್ನು ನಿರ್ಮಿಸಲಾಗಿತ್ತು. ಸದರಿ ಮನೆಯ ಗೃಹ ಪ್ರವೇಶಕ್ಕೆ ಅತಿಥಿಯಾಗಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರನ್ನು ಕರೆಸಬೇಕೆಂಬುದು ಅಜ್ಜಿಯ ಆಸೆಯಾಗಿತ್ತು. ಈ ಆಸೆಯನ್ನು ಅಜ್ಜಿ ವಾರ್ಡಿನ ಸದಸ್ಯ ಜಬ್ಬಾರ್ ಅವರಿಗೆ ತಿಳಿಸಿದ್ದರು.
ಜಬ್ಬಾರ್ ಅವರು ಈ ವಿಷಯವನ್ನು ಭಾನುವಾರ ತಡರಾತ್ರಿ ಶಾಸಕರ ಗಮನಕ್ಕೆ ತಂದು, ಗೃಹ ಪ್ರವೇಶಕ್ಕೆ ಬರುವಂತೆ ಕೋರಿದರು. ಸೋಮವಾರ ಪೂರ್ವ ನಿರ್ಧಾರಿತ ಆಗಿದ್ದ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಸಂಜೆ ಬಿಡುವು ಮಾಡಿಕೊಂಡು ಅಜ್ಜಿಯ ನೂತನ ಮನೆಗೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ನೀಡಿ ಅಜ್ಜಿ ನಾಗಮ್ಮ ಅವರ ಆಶೀರ್ವಾದ ಪಡೆದರು. ನೂತನ ಮನೆಯ ದೀಪ ಬೆಳಗಿ ಮನೆಯನ್ನು ಉದ್ಘಾಟಿಸಿದರು.
ತನ್ನ ನೂತನ ಪುಟ್ಟ ಮನೆಗೆ ಭೇಟಿ ನೀಡಿದ ಶಾಸಕರನ್ನು ಕಂಡು ಅಜ್ಜಿ ನಾಗಮ್ಮ ಭಾವುಕರಾದರು. “ಧಣಿ ವಚ್ಚಾಡಾ?” (ಧಣಿ ಬಂದನಾ?) ಎಂದು ಉದ್ಗರಿದರು. ಅಜ್ಜಿಯ ಮೊಮ್ಮಗ ವೀರೇಶ್ (ಮಾಸ್), ನೆರೆಯ ನಿವಾಸಿಗಳು ಈ ಭಾವುಕ ಸಂದರ್ಭಕ್ಕೆ ಸಾಕ್ಷಿಯಾದರು.