ಹೊಸ ಪಕ್ಷವಾಗಿದ್ದರೂ ಕಳೆದ ಎರಡು ಬಾರಿ ಗೆದ್ದು ದೆಹಲಿಯನ್ನು ಆಳಿದ್ದ ಆಮ್ ಆದ್ಮಿ ಪಕ್ಷವು ಈ ಬಾರಿ ನೆಲ ಕಚ್ಚಿದೆ. 27 ವರ್ಷಗಳ ಬಳಿಕ ಬಿಜೆಪಿ ಗದ್ದುಗೆ ಏರಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ನ್ನೂ ಕಳೆದುಕೊಳ್ಳುವ ಭಯದಲ್ಲಿರುವ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟವನ್ನು ದೆಹಲಿಗೆ ಕರೆಸಿದ್ದಾರೆ. ತಮ್ಮ ಇಡೀ ಸಚಿವ ಸಂಪುಟದೊಂದಿಗೆ ಚಂಡೀಗಢದಿಂದ ದೆಹಲಿಗೆ ತೆರಳಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಪದಚ್ಯುತಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹೇಳಿಕೊಂಡಿವೆ. ಭಗವಂತ್ ಮಾನ್ ದೆಹಲಿಯಲ್ಲಿ ಪ್ರಚಾರ ಮಾಡಿದ್ದ 12ಕ್ಕೆ 12 ಕ್ಷೇತ್ರದಲ್ಲಿ ಎಎಪಿ ಸೋಲು ಕಂಡಿದೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಕ್ಷೇತ್ರವೂ ಇತ್ತು.