ಧಾರವಾಡ : ಶರಣರನ್ನು ನಾವು ನೋಡಿಲ್ಲ, ಆದರೆ ಅವರ ಜಯಂತಿಯಲ್ಲಿ ಭಾಗವಹಿಸುವುದೇ ನಮ್ಮ ಒಂದು ಪುಣ್ಯ. ಇಂತಹ ಮಹಾನ ಪುಣ್ಯವಂತರ ಶರಣರ ಸಂದೇಶಗಳನ್ನು ನಾವು ಮುಂದಿನ ಕಾಲಕ್ಕೂ ಸಾರಬೇಕು ಎಂದು ಶಾಸಕ ಎನ್.ಹೆಚ್.ಕೋನರಡ್ಡಿ ಅವರು ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಆಗಿನ ದಿನಗಳಲ್ಲಿ ಒಂದೇ ಮನೆಯ ಅಣ್ಣ-ತಮ್ಮಂದಿರ ಹಾಗೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೆವು ಆದರೆ ಇತ್ತೀಚಿನ ದಿನಗಳಲ್ಲಿ ಸಹ ಹಾಗೆ ಜೀವನ ನಡೆಸಬೇಕು ಎಂದರೆ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಮಾತ್ರ ಅದು ಸಾಧ್ಯ. ಇತಿಹಾಸ ನಮ್ಮ ಮುಂದೆ ಇದೆ. ಆದರೆ ಅದನ್ನು ನಾವು ಓದಿಕೊಂಡು ತಿಳಿದುಕೊಳ್ಳಬೇಕು. ಯೋಗಿಗಳು, ಶರಣರು, ಸಂತರು ಬಾಳಿದ ಹಾಗೆ ನಾವು ನೀವು ಬಾಳಿಕೊಂಡು ಹೋಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಪರಿಪೂರ್ಣವಾಗಿ ಶರಣರ ಅಧ್ಯಯನವನ್ನು ಮಾಡಬೇಕು ಹಾಗೂ ಅರ್ಥ ಮಾಡಿಕೊಂಡು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕದ ಜೊತೆ ಗೆಳೆತನ ಮಾಡಬೇಕು. ನಾವೆಲ್ಲ ಒಂದೇ ಎಂದು ತಿಳಿದು ಬದುಕಬೇಕು. ಶಿವಶರಣರು ಬರೆದ ಪ್ರತಿಯೊಂದು ವಚನಗಳು ಅರ್ಥಗರ್ಭಿತವಾಗಿವೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ನಮ್ಮ ಜಾತಿ ವ್ಯವಸ್ಥೆಯು ಉದ್ಭವವಾಗಿರುವುದು ನಾವು ಮಾಡುವ ಕಾಯಕದಿಂದ ಶರಣರ ಜಯಂತಿಯನ್ನು ಆಚರಿಸುವ ಮೂಲಕ ಎಲ್ಲಾ ಜಾತಿಯ ಜನರನ್ನು ಸಹ ಈಗಿನ ಜಗತ್ತು ಮೇಲಿನ ಪಂತಿಗೆ ತರುತ್ತಿದೆ ಎಂದರು.
ಮಾದರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರು ಎಲ್ಲರೂ ತಮ್ಮ ಕಾಯಕಗಳ ಮುಖಾಂತರ ಶರಣರ ಸಂಸ್ಕøತಿಗೆ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಮಾನ್ಯ ಮನುಷ್ಯರಿಗೂ ಕೂಡ ಅರ್ಥ ಆಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಪದ ಬಳಕೆ ಮಾಡಿ ವಚನಗಳನ್ನು ರಚಿಸಿದ್ದಾರೆ. ಆ ವಚನಗಳ ಮುಖಾಂತರ ನಮಗೆಲ್ಲ ಸಂಸ್ಕೃತಿಯ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಶ್ರೀ ಮಾದಾರ ಚನ್ನಯ್ಯ ಹಾಗೂ ಶ್ರೀ ಮಾದಾರ ಧೂಳಯ್ಯ ಅವರ ಕುರಿತು ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಜ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮಹದೇವಪ್ಪ ದಳಪತಿ, ಶ್ರೀ ಡೋಹರ ಕಕ್ಕಯ್ಯ ಅವರ ಕುರಿತು ಶರಣ ಹರಳಯ್ಯ ಪತ್ರಿಕೆ ಸಂಪಾದಕ ಡಾ. ಮಾರ್ಕಂಡೇಯ ದೊಡಮನಿ, ಶ್ರೀ ಸಮಗಾರ ಹರಳಯ್ಯ ಅವರ ಕುರಿತು ಹಾನಗಲ್ ಗಣಕ ವಿಜ್ಞಾನ ವಿಭಾಗದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಪ್ರೊ. ರಾಜೇಶ ಹೊಂಗಲ್ ಹಾಗೂ ಶ್ರೀ ಉರಿಲಿಂಗ ಪೆದ್ದಿ ಅವರ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ ಆರ್.ಕಾಂಬಳೆ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಆರತಿ ದೇವಶಿಕಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಡಾ. ನೀಲಕಂಠ ಮಿಶ್ರಿಕೋಟಿ, ಲಕ್ಷ್ಮಣ ಬಕ್ಕಾಯಿ, ಮಹೇಶ ಹುಲಣ್ಣವರ, ಅಣ್ಣಪ್ಪ ಕರಾಠೆ, ಯಲ್ಲಪ್ಪ ಸವಣೂರ ಹಾಗೂ ಕಾಯಕ ಸಮಾಜದ ಅಧ್ಯಕ್ಷರು ಸಾರ್ವಜನಿಕರು ಹಾಗೂ ಇತರರು ಭಾಗವಹಿಸಿದ್ದರು.