ನವದೆಹಲಿ, ಫೆಬ್ರುವರಿ 10: ಏಟಿಗೆ ಏಟು ಎನ್ನುವ ನೀತಿಗೆ ಕಟ್ಟುಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ಉಕ್ಕು ಮತ್ತು ಅಲೂಮಿನಿಯಮ್ ಆಮದುಗಳ ಮೇಲೆ ಶೇ. 25 ಸುಂಕ ವಿಧಿಸುತ್ತಿರುವುದಾಗಿ ಹೇಳಿದ್ದಾರೆ. ಈಗ ಇರುವ ಸುಂಕಗಳ ಜೊತೆಗೆ ಹೆಚ್ಚುವರಿಯಾಗಿ ಶೇ. 25ರಷ್ಟು ಆಮದು ಸುಂಕ ಹಾಕಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ‘ಅಮೆರಿಕಕ್ಕೆ ಬರುತ್ತಿರುವ ಯಾವುದೇ ಉಕ್ಕಿಗೆ ಶೇ. 25ರಷ್ಟು ಆಮದು ಸುಂಕ ತೆರಬೇಕಾಗುತ್ತದೆ’ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕಕ್ಕೆ ಹಲವು ದೇಶಗಳು ಉಕ್ಕು ಮತ್ತು ಅಲೂಮಿನಿಯಮ್ ಉತ್ಪನ್ನಗಳನ್ನು ಸರಬರಾಜು ಮಾಡುತ್ತವೆ. ಕೆನಡಾ, ಬ್ರೆಜಿಲ್, ಮೆಕ್ಸಿಕೋ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳಿಂದ ಅತಿಹೆಚ್ಚು ಸ್ಟೀಲ್ ಮತ್ತು ಅಲೂಮಿನಿಯಂ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಈ ಪೈಕಿ ಶೇ. 75ಕ್ಕೂ ಹೆಚ್ಚು ಪಾಲು ಕೆನಡಾದ್ದಾಗಿದೆ. ಈಗ ಟ್ರಂಪ್ ಅವರು ಆಮದು ಸುಂಕ ವಿಧಿಸುವುದರಿಂದ ಕೆನಡಾಗೆ ಅತಿಹೆಚ್ಚು ಪರಿಣಾಮವಾಗುತ್ತದೆ. ಬ್ರೆಜಿಲ್, ಮೆಕ್ಸಿಕೋಗೂ ಪರಿಣಾಮ ಉಂಟಾಗುತ್ತದೆ.
ಭಾರತೀಯ ಕಂಪನಿಗಳಿಂದ ಅಮೆರಿಕಕ್ಕೆ ಉಕ್ಕು ಮತ್ತು ಅಲೂಮಿನಿಯಂ ಉತ್ಪನ್ನಗಳ ರಫ್ತಾಗುವುದು ಕಡಿಮೆ. ಇಟಲಿ, ನೇಪಾಳ ಮತ್ತು ಬೆಲ್ಜಿಯಂ ದೇಶಗಳು ಭಾರತೀಯ ಉಕ್ಕು ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಎನಿಸಿವೆ. ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್, ಸ್ಟೀಲ್ ಅಥಾರಿಟಿ (ಎಸ್ಎಐಎಲ್), ಇವು ಭಾರತದ ಪ್ರಮುಖ ಉಕ್ಕು ಉತ್ಪಾದಕ ಸಂಸ್ಥೆಗಳಾಗಿವೆ.