ಸಿದ್ಲಿಂಗು, ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ಕಥೆ.ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಸಿದ್ಲಿಂಗು 2’ ಚಿತ್ರವು ಫೆಬ್ರವರಿ 14ರಂದು ಪ್ರೇಮಿಗಳ ದಿನದ ಅಂಗವಾಗಿ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಮೊದಲ ವೀಡಿಯೋ ಹಾಡು ನಾಗದೇವನಹಳ್ಳಿ ಬಳಿಯ ಅನಾಥಶ್ರಮದಲ್ಲಿ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಹಾಜರಿದ್ದರು.
ಕಥೆಯೊಂದು ಎಂದು ಶುರುವಾಗುವ ಈ ಹಾಡನ್ನು ಅರಸು ಅಂತಾರೆ ಬರೆದರೆ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸುವುದರ ಜೊತೆಗೆ, ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ಯೋಗಿ ಮತ್ತು ನಾಯಕಿ ಸೋನುಗೌಡ ಅಭಿನಯದಲ್ಲಿ ಈ ಹಾಡು ಮೂಡಿಬಂದಿದೆ.
‘ಸಿದ್ಲಿಂಗು 2’ ಚಿತ್ರದ ಕುರಿತು ನಾಯಕನಟ ಯೋಗಿ ಮಾತನಾಡಿ “ಈ ಚಿತ್ರದ ಮುಹೂರ್ತ ಕಳೆದ ವರ್ಷ ದೇವರ ಎದುರು ಆಗಿತ್ತು. ಈಗ ಚಿತ್ರದ ಮೊದಲ ಹಾಡು ದೇವರ ಮಕ್ಕಳ ಎದುರು ಬಿಡುಗಡೆಯಾಗುತ್ತಿದೆ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾವೆಲ್ಲರೂ ಬಹಳ ಎಕ್ಸೈಟ್ ಆಗಿದ್ದೇವೆ. ತುಂಬಾ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ತುಂಬಾ ಅವಮಾನಗಳನ್ನು ಎದುರಿಸಿ ಮಾಡಿರುವ ಸಿನಿಮಾ. ನಿರ್ಮಾಪಕರಾದ ಹರಿ ಮತ್ತು ರಾಜು, ನಮ್ಮ ಕಷ್ಟದ ಸಮಯದಲ್ಲಿ ಬಂದು ನಮ್ಮ ಜೊತೆಗೆ ಸಿನಿಮಾ ಮಾಡಿದ್ದಾರೆ.
ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಅವರಿಗೆ ಸಣ್ಣ ವಿಷಯವಿರಬಹುದು. ಆ ದೇವರು ನನಗೆ ಮತ್ತು ವಿಜಯಪ್ರಸಾದ್ ಅವರಿಗೆ ನಿಮ್ಮಿಂದ ಒಳ್ಳೆಯ ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ. ಸೋನು ಹಳೆಯ ಪರಿಚಯ. ಇದೇ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡಿದ್ದೇವೆ. ನನಗೂ, ವಿಜಯಪ್ರಸಾದ್ ಅವರಿಗೂ ಈ ಸಿನಿಮಾದಲ್ಲಿ ಆಗಿರುವ ಜಗಳ, ಇರುಸುಮುರುಸು ಈ ಹಿಂದೆ ಆಗಿಲ್ಲ. ಅದು ಸಿನಿಮಾ ವಿಷಯಕ್ಕೆ ಮಾತ್ರ. ಅವರ ಜೊತೆಗೆ ಕೆಲಸ ಮಾಡುವುದು ಖುಷಿಯ ವಿಚಾರ. ಒಬ್ಬ ಪರಿಪೂರ್ಣ ನಟ ಆಗಬೇಕು ಅಂದರೆ, ಅವರ ಜೊತೆಗೆ ಕೆಲಸ ಮಾಡಬೇಕು. ಮುಂದೆ ಸಹ ಅವರ ಜೊತೆಗೆ ಇನ್ನಷ್ಟು ಕೆಲಸ ಮಾಡುವ ಆಸೆ ಇದೆ” ಎಂದರು.
ನಿರ್ದೇಶಕ ವಿಜಯಪ್ರಸಾದ್ “ಐಷಾರಾಮಿ ಹೋಟೆಲ್‍ಗಳಲ್ಲಿ, ಸೆಲೆಬ್ರಿಟಿಗಳ ಮಧ್ಯೆ ಹಾಡುಗಳನ್ನು ಬಿಡುಗಡೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ‘ಸಿದ್ಲಿಂಗು 2’ ಚಿತ್ರತಂಡದವರಿಗೆ ಮನಸುಗಳ ಮಧ್ಯೆ, ಒಳ್ಳೆಯ ಮನಸುಗಳಿರುವ ಮನುಷ್ಯರ ಮಧ್ಯೆ ಹಾಡು ಬಿಡುಗಡೆ ಮಾಡಿದರೆ ಅರ್ಥಪೂರ್ಣ ಎಂಬ ಕಾರಣಕ್ಕೆ ಇಲ್ಲಿ ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಹಾಗಾಗಿ, ವಿಶೇಷ ಮಕ್ಕಳ ಆಶ್ರಮದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಯೋಗಿ ಮತ್ತು ಸೋನು ಪಾತ್ರಧಾರಿಗಳಾಗಿ ಇಲ್ಲಿಗೆ ಬಂದಿದ್ದಾರೆ.
ಇಡೀ ಸಿನಿಮಾದಲ್ಲಿ ಯೋಗಿ ಇದೇ ವೇಷದಲ್ಲಿರುತ್ತಾರೆ. ಯೋಗಿ ಜೊತೆಗೆ ಇಬ್ಬರು ಹೀರೋಗಳು ಇಲ್ಲಿಗೆ ಬಂದಿದ್ದಾರೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಅರಸು ಅಂತಾರೆ ಆ ಇಬ್ಬರು ಹೀರೋಗಳು. ಅನೂಪ್ ಸೀಳಿನ್ ಜೀವಂತವಾಗಿರುವ ಹಾಡೊಂದನ್ನು ಕೊಟ್ಟಿದ್ದಾರೆ. ಅಷ್ಟೇ ಜೀವಂತವಾದ ಸಾಹಿತ್ಯವನ್ನು ಅರಸು ಬರೆದಿದ್ದಾರೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಈ ತಂಡದ ಮೇಲಿರಲಿ” ಎಂದರು.
ನಾಯಕಿ ಸೋನು “ನಾನು ಈ ತಂಡಕ್ಕೆ ಹೊಸಬಳು. ಆದರೆ, ಹೊಸಬಳು, ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೀನಿ ಅಂತ ಅನಿಸಲಿಲ್ಲ. ನನ್ನ ಮತ್ತು ಯೋಗಿಯ ನಡುವೆ ಒಳ್ಳೆಯ ಸ್ಪರ್ಧೆ ಇತ್ತು. ಪ್ರತಿ ದಿನ ಒಂದೊಳ್ಳೆಯ ಅನುಭವ ಆಯಿತು. ವಿಜಯಪ್ರಸಾದ್ ಅವರಿಂದ ಮೊದಲ ಟೇಕ್‍ನಲ್ಲಿ ಓಕೆ ಅಂತನಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಪ್ರತೀ ದಿನ ಮೊದಲ ಟೇಕ್‍ನಲ್ಲಿ ಓಕೆ ಆಗಬೇಕೆಂದು ತಯಾರಿ ಮಾಡಿಕೊಂಡು ಬರುತ್ತಿದ್ದೆ. ಒಬ್ಬ ವಿದ್ಯಾರ್ಥಿಯಾಗಿ ಅವರಿಂದ ಕಲಿಯುವುದು ಸಾಕಷ್ಟು ಇದೆ. ಅನೂಪ್ ಸೀಳಿನ್ ಹಾಡುಗಳ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದಾರೆ. ಒಂದೊಳ್ಳೆಯ ಚಿತ್ರದಲ್ಲಿ ನಟಿಸಿರುವುದಕ್ಕೆ ಬಹಳ ಖುಷಿ ಇದೆ” ಎಂದರು.
‘ಸಿದ್ಲಿಂಗು 2’ ಚಿತ್ರವನ್ನು ಶ್ರೀಹರಿ ಮತ್ತು ರಾಜು ಶೇರಿಗಾರ್ ನಿರ್ಮಿಸಿದ್ದು, ಯೋಗಿ, ಸೋನು ಗೌಡ, ಸುಮನ್ ರಂಗನಾಥ್, ಗಿರಿಜಾ ಲೋಕೇಶ್, ಮಹಾಂತೇಶ್, ಆ್ಯಂಟೋನಿ ಕಮಲ್, ಮಂಜುನಾಥ ಹೆಗಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗುರ್ಲಕೆರೆ ಛಾಯಾಗ್ರಹಣ ಮತ್ತು ಅಕ್ಷಯ್ ಪಿ. ರಾವ್ ಅವರ ಸಂಕಲನವಿದೆ. ‘ಭೀಮ’ ಚಿತ್ರದ ನಿರ್ಮಾಪಕ ಜಗದೀಶ್ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.