ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ವೋಟಿಂಗ್‌: ಮುರ್ಮು, ರಾಹುಲ್‌, ಪುರಿ ಮತದಾನ

Ravi Talawar
ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ವೋಟಿಂಗ್‌: ಮುರ್ಮು, ರಾಹುಲ್‌, ಪುರಿ ಮತದಾನ
WhatsApp Group Join Now
Telegram Group Join Now

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಯ 70 ವಿಧಾನಸಭಾ ಸ್ಥಾನಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಯಿತು. 8ನೇ ವಿಧಾನಸಭೆ ಚುನಾವಣೆಯು ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ.

ಸಿಎಂ ಅತಿಶಿ ವಿರುದ್ಧ ಕಣಕ್ಕಿಳಿದಿರುವ ಕಾಂಗ್ರೆಸ್​ ಅಭ್ಯರ್ಥಿ ಅಲ್ಕಾ ಲಂಬಾ ಅವರು ಬೆಳ್ಳಂಬೆಳಗ್ಗೆ ಮದಿಪುರ್​ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, “ದೆಹಲಿಯ ಜನರು ಬದಲಾವಣೆ ಮತ್ತು ಅಭಿವೃದ್ಧಿ ಬಯಸಿದ್ದಾರೆ. ಆ ಬದಲಾವಣೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ 10 ವರ್ಷಗಳಲ್ಲಿ ದೆಹಲಿಯನ್ನು ಹೇಗೆ ಅಭಿವೃದ್ಧಿಹೀನ ಮಾಡಲಾಗಿದೆ ಎಂಬುದು ಕಣ್ಣಮುಂದಿದೆ. ದೆಹಲಿಯ ಮತದಾರರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ, ಬದಲಾವಣೆಗಾಗಿ ಮತ ಚಲಾಯಿಸಲಿದ್ದಾರೆ” ಎಂದು ಹೇಳಿದರು.

ಗಣ್ಯರಿಂದ ಮತದಾನ: ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಪಕ್ಷ ನಾಯಕ ರಾಹುಲ್​ ಗಾಂಧಿ, ಬಿಜೆಪಿ ಸಂಸದೆ ಸುಷ್ಮಾ ಸ್ವರಾಜ್​ ಪುತ್ರಿ ಬಾನ್ಸುರಿ ಸ್ವರಾಜ್​, ಬಿಜೆಪಿ ಅಭ್ಯರ್ಥಿ ಅರ್ವಿಂದರ್​ ಸಿಂಗ್​ ಲವ್ಲಿ, ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ, ಆಪ್​ ನಾಯಕ ಮನೀಶ್​ ಸಿಸೋಡಿಯಾ ಅವರು ತಮಗೆ ನಿಗದಿ ಮಾಡಿದ ಕೇಂದ್ರಗಳಲ್ಲಿ ಮತದಾನ ಮಾಡಿದರು.

1.56 ಕೋಟಿ ಮತದಾರರು: ದೆಹಲಿಯಲ್ಲಿ 1,56,14,000 ನೋಂದಾಯಿತ ಮತದಾರರಿದ್ದಾರೆ. ಇದರಲ್ಲಿ 83,76,173 ಪುರುಷರು, 72,36,560 ಮಹಿಳೆಯರು ಮತ್ತು 1,267 ತೃತೀಯ ಲಿಂಗ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ 18-19 ವರ್ಷ ವಯಸ್ಸಿನ 2,39,905 ಮೊದಲ ಬಾರಿಗೆ ಮತದಾರ ಮಾಡಲಿದ್ದರೆ, 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 1,09,368 ವೃದ್ಧರು ಮತ್ತು 79,885 ಅಂಗವಿಕಲರು ಮತದಾನಕ್ಕೆ ಅರ್ಹರಾಗಿದ್ದಾರೆ.

ಚುನಾವಣೆ ಹಿನ್ನೆಲೆ ಸುಮಾರು 97,955 ಸಿಬ್ಬಂದಿ ಮತ್ತು 8,715 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 220 ತಂಡಗಳು, 19 ಸಾವಿರ ಗೃಹರಕ್ಷಕ ಸಿಬ್ಬಂದಿ ಮತ್ತು 35,626 ದೆಹಲಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದಾರೆ.

WhatsApp Group Join Now
Telegram Group Join Now
Share This Article