ಬೀದರ್, ಫೆಬ್ರವರಿ 05: ಬೀದರ್ ಜಿಲ್ಲಾಸ್ಪತ್ರೆ ಬ್ರಿಮ್ಸ್ ಕೊಟ್ಯಾಂತರ ರೂಪಾಯಿ ಬಿಲ್ ಮತ್ತು ತೆರಿಗೆ ಬಾಕಿ ಉಳಿಸಿಕೊಂಡಿದೆ. ಬ್ರಿಮ್ಸ್ ಆಸ್ಪತ್ರೆ ಕಳೆದ 15 ವರ್ಷಗಳಿಂದ ನೀರಿನ, ಆಸ್ತಿ ಕರ ಮತ್ತು ವಿದ್ಯುತ್ ಬಿಲ್ ಪಾವತಿಸಿಲ್ಲ. 10.98 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ನೀರಿನ ಕರ 1.45 ಕೋಟಿ ರೂ. ಮತ್ತು ಆಸ್ತಿ ಕರ8.32 ಕೋಟಿ ರೂ. ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬೀದರ್ ನಗರ ಸಭೆ ನೀರಿನ ಕರ, ಆಸ್ತಿ ಕರ ಪಾವತಿಸುವಂತೆ ಹತ್ತಾರು ನೋಟೀಸ್ ನೀಡಿದ್ದರೂ ಸಹಿತ ಬ್ರಿಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನೀರು ಸರಬರಾಜು ನಿಲ್ಲಿಸುತ್ತೇವೆ ಎಂದು ನಗರ ಸಭೆಯ ಆಯುಕ್ತರು ಎಚ್ಚರಿಸಿದ್ದಾರೆ.
ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ತೆರಿಗೆ ವಸೂಲಿ ಮಾಡಿದ್ದರೇ ಇಷ್ಟೊತ್ತಿಗಾಗಲೇ ತೆರಿಗೆ ಹಣ ನಗರಸಭೆಗೆ ಬರುತ್ತಿತ್ತು ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಸೂಲಾಗದೆ ಹಾಗೆ ಉಳಿದಿದೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೂ ಕೂಡಾ ಕಾರಣವಾಗಿದೆ. 2010 ರಿಂದ 2025ರ ಜನವರಿವರೆಗೆ ಬ್ರಿಮ್ಸ್ ಆಸ್ಪತ್ರೆಯಿಂದ ನೀರಿನ ಕರ ಹಾಗೂ ಆಸ್ತಿಕರ ಒಟ್ಟು 9.77 ಲಕ್ಷ ರೂ. ನಗರಸಭೆಗೆ ಬರಬೇಕಿದೆ.