ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಾರು ಎಂಬುದಕ್ಕೆ ಇನ್ನೊಂದು ವಾರದಲ್ಲಿಯೇ ಉತ್ತರ ಸಿಗಲಿದೆ. ತದನಂತರ ಪಕ್ಷದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಆಂತರಿಕ ಗೊಂದಲಗಳ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಂತರಿಕ ಗೊಂದಲಗಳು, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಎಷ್ಟು ಹಾನಿಯಾಗಬೇಕೋ ಅಷ್ಟು ಆಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಜವಾಬ್ದಾರಿಯ ಅರಿವು ನನಗಿರುವುದರಿಂದ ಕಳೆದೊಂದು ವರ್ಷದಿಂದ ಪಕ್ಷದ ಮುಖಂಡರು ಹಾಗೂ ಪಕ್ಷದ ವಿರುದ್ಧ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಈ ಭ್ರಷ್ಟ-ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ ಎಂದರು.
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಮಂಡಲ, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟಿತವಾಗಿ ನಡೆದಿರುವ ಚುನಾವಣೆ ಬೇರೆ ಎಲ್ಲೂ ನಡೆಯಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರ ನಿರ್ಧಾರದಂತೆ ಎಲ್ಲವೂ ನಡೆದಿದೆ ಎಂದು ಹೇಳಿದರು.
ರಾಜ್ಯದ ಜನರಿಗೆ, ಪಕ್ಷದ ಕಾರ್ಯಕರ್ತರು, ಶಾಸಕರಿಗೆ ಪಕ್ಷದ ಸಂಘಟನೆಯಲ್ಲಿ ವಿಜಯೇಂದ್ರ ಮಾಡಿರುವ ಕೆಲಸ ಗೊತ್ತಿದೆ. ನನಗೆ ವಿಶ್ವಾಸವಿದೆ. ಎಲ್ಲರ ಸಹಕಾರದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಮುಂದುವರೆಯುವೆ. ಪಕ್ಷವನ್ನು ಮತ್ತೆ ಬಲಪಡಿಸುವೆ ಎಂದರು.