ಚಂಡೀಗಢ: ಹರಿಯಾಣದ ರೋಹ್ಟಕ್ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿವಾದಾತ್ಮಕ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಮಂಗಳವಾರ ಮತ್ತೊಮ್ಮೆ 30 ದಿನಗಳ ಪೆರೋಲ್ ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಮ್ ರಹೀಮ್ ಸಿಂಗ್ಗೆ ಇದು 12ನೇ ಪೆರೋಲ್ ಆಗಿದೆ. ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಮೇಲೆ ಈತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
2017ರ ಆಗಸ್ಟ್ನಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಇದೇ ಮೊದಲ ಬಾರಿಗೆ ಸಿರ್ಸಾದಲ್ಲಿರುವ ತನ್ನ ಪಂಥದ ಡೇರಾಗೆ ತೆರಳಲಿರುವ ಗುರ್ಮೀತ್, ಅಲ್ಲಿ 10 ದಿನಗಳ ಕಾಲ ಇರಲಿದ್ದಾನೆ. ನಂತರ ಉತ್ತರ ಪ್ರದೇಶದ ಬಾಗ್ ಪಥ್ಗೆ ತೆರಳಲಿದ್ದಾನೆ.
ಕಳೆದ ವರ್ಷದ ಅಕ್ಟೋಬರ್ 5ರಂದು ಹರಿಯಾಣದಲ್ಲಿ ಮತದಾನ ನಡೆಯಲು ನಾಲ್ಕು ದಿನಗಳ ಮುನ್ನ ಗುರ್ಮೀತ್ 20 ದಿನಗಳ ಪೆರೋಲ್ ಪಡೆದಿದ್ದ. ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದ ಈತ ಅವರ ಮೇಲೆ ರಾಜಕೀಯವಾಗಿ ಪ್ರಭಾವ ಬೀರಬಲ್ಲವನಾಗಿದ್ದರಿಂದ ಹರಿಯಾಣದ ರಾಜಕೀಯ ಮುಖಂಡರು ಮತ್ತು ಪಕ್ಷಗಳು ದಶಕಗಳ ಕಾಲ ಈತನ ಬೆಂಬಲ ಪಡೆಯಲು ಹಾತೊರೆಯುತ್ತಿದ್ದರು.
ಕಳೆದ ಬಾರಿ ತಮ್ಮ ತಂದೆ ಮಗರ್ ಸಿಂಗ್ ಅವರ ಪುಣ್ಯತಿಥಿಯ ಕಾರಣಕ್ಕಾಗಿ ಪೆರೋಲ್ ಕೋರಿದ್ದ. ಅಕ್ಟೋಬರ್ 5ರಂದು ಈತನ ತಂದೆಯ ಪುಣ್ಯತಿಥಿಯನ್ನು ಪಾರಮಾರ್ಥಿ ದಿವಸ್ ಎಂದು ಆಚರಿಸಲಾಗುತ್ತದೆ. ಕಳೆದ ವರ್ಷ ಹರಿಯಾಣ ಸರ್ಕಾರ ಆಗಸ್ಟ್ನಲ್ಲಿ ಈತನಿಗೆ 21 ದಿನಗಳ ಫರ್ಲೋ ರಜೆಯನ್ನು ನೀಡಿತ್ತು. ಅದು ಸೆಪ್ಟೆಂಬರ್ 2ರಂದು ಕೊನೆಗೊಂಡಿತ್ತು.