ಕೃಷಿ ತಾಂತ್ರಿಕ ಸಪ್ತಾಹದ ಅಂಗವಾಗಿ ಎಣ್ಣೆ ಕಾಳು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮ

Ravi Talawar
ಕೃಷಿ ತಾಂತ್ರಿಕ ಸಪ್ತಾಹದ ಅಂಗವಾಗಿ ಎಣ್ಣೆ ಕಾಳು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮ
WhatsApp Group Join Now
Telegram Group Join Now

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯ ಕೆಎಲ್‌ಇ-ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಆವರಣದಲ್ಲಿ ಎಣ್ಣೆ ಕಾಳು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಭಾ.ಕೃ.ಅ.ಪ-ಅಖಿಲ ಭಾರತೀಯ ಸಮನ್ವಯ ಶೇಂಗಾ ಸಂಶೋಧನಾ ಯೋಜನೆಯ ವಿಜ್ಞಾನಿಗಳು ರೈತರಿಗೆ ತರಬೇತಿ ನೀಡಿದರು. ಬೆಳಗಾವಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕರು ಹಾಗೂ ಬೈಲಹೊಂಗಲದ ಮಾಜಿ ಶಾಸಕರಾದ ಡಾ. ವ್ಹಿ. ಆಯ್. ಪಾಟೀಲರವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರೈತರು ಎಣ್ಣೆ ಕಾಳು ಬೆಳೆ ಬೆಳೆಯಲು ಆಸಕ್ತಿ ತೋರಬೇಕು ಎಂದರು. ಆರೋಗ್ಯದ ದೃಷ್ಟಿಯಿಂದ ನಾವು ಸಂಸ್ಕರಿಸಿದ ಎಣ್ಣೆಯನ್ನು ಬಳಸುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಶೇಂಗಾ ಹಾಗೂ ಕುಸುಬೆ ಬೆಳೆಯನ್ನು ರೈತರು ಬೆಳೆಯುತ್ತಿದ್ದು ಅದನ್ನೇ ಬಳಸುತ್ತಿದ್ದರು. ಕಾಲಕ್ರಮೇಣ ಸದರಿ ಬೆಳೆಗಳು ಮಾಯವಾಗಿ ಸಂಸ್ಕರಿಸಿದ ಹಾಗೂ ಆಮದು ಮಾಡಿದ ಎಣ್ಣೆಯನ್ನು ಬಳಸುತ್ತಿದ್ದೇವೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ರೈತರು ಮತ್ತೆ ಶೇಂಗಾ, ಸೂರ್ಯಕಾಂತಿ, ಕುಸುಬೆ ಮುಂತಾದ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದರು. ಇದಲ್ಲದೆ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಗಳು ಗುಣಮಟ್ಟದ ಬೀಜವನ್ನು ಒದಗಿಸುವಲ್ಲಿ ಶ್ರಮಿಸಬೇಕು ಎಂದರು. ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಗಣನೀಯ ಸಾಧನೆ ಮಾಡಿದ ಕೆಎಲ್‌ಇ ಸಂಸ್ಥೆಯು ಈಗ ಕೃಷಿ ವಲಯದಲ್ಲೂ ಕಾರ್ಯತತ್ಪರವಾಗಿದ್ದು ಕೃಷಿ ವಿಜ್ಞಾನ ಕೇಂದ್ರದಂತಹ ಸಂಸ್ಥೆಯನ್ನು ಹುಟ್ಟುಹಾಕಿದ್ದು ಬೆಳಗಾವಿ ಜಿಲ್ಲೆಯ ರೈತರು ಈ ಕೇಂದ್ರದಿಂದ ತಾಂತ್ರಿಕ ಮಾಹಿತಿಯನ್ನು ಪಡೆದು ಉತ್ತಮ ಬೆಳೆ ಪಡೆದು ಆರ್ಥಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸಲು ಕೋರಿದರು. ಮಾರುಕಟ್ಟೆ ಬೆಲೆಯನ್ನು ಅವಲಂಬಿಸಿ ಒಂದೇ ಬೆಳೆಯನ್ನು ಬೆಳೆಯದೆ ಹಲವು ಬೆಳೆಗಳನ್ನು ಬೆಳೆದು ಸಮಗ್ರ ಕೃಷಿಗೆ ಒತ್ತುಕೊಟ್ಟು ಮುಂದಿನ ಆರೋಗ್ಯವನ್ನು ಕಾಪಾಡಿಕೊಂಡು ಕೃಷಿಯನ್ನು ನಿರ್ವಹಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಎಣ್ಣೆ ಕಾಳು ಸಂಶೋಧನಾ ಯೋಜನೆಯ ಬೇಸಾಯ ತಜ್ಞ ಡಾ. ಬಸವರಾಜ ಶಿ. ಏಣಗಿಯವರು ಶೇಂಗಾ ಬೆಳೆಯ ವಿವಿಧ ತಳಿಗಳು ಹಾಗೂ ಅವುಗಳ ನಿರ್ವಹಣೆ, ಕೀಟ ತಜ್ಞರಾದ ಡಾ. ಸಿದ್ಲಿಂಗಪ್ಪ ಹೂಗಾರ ಇವರು ಸಮಗ್ರ ಕೀಟ ನಿರ್ವಹಣೆ ಕುರಿತು ಸಸ್ಯ ರೋಗ ತಜ್ಞರಾದ ಡಾ. ಗುರುಪಾದ ಬಲ್ಲೋಳ ಇವರು ಶೇಂಗಾ ಬೆಳೆಯ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕೃಷಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಈ ತರಬೇತಿಯಲ್ಲಿ ಒಟ್ಟು ೪೦ ರೈತರು ಭಾಗವಹಿಸಿದ್ದು ಕೃಷಿ ವಿಜ್ಞಾನ ಕೇಂದ್ರದ ಶೈಕ್ಷಣಿಕ ಕ್ಷೇತ್ರಗಳಿಗೂ ಭೇಟಿ ನೀಡಿ ಮಾಹಿತಿ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತಿಕೊಪ್ಪದ ಕೆಎಲ್‌ಇ ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ವಹಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಯ ರೈತರು ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದು ಗುಣಮಟ್ಟದ ಬೀಜ, ಜೈವಿಕ ಪರಿಕರಗಳು ಹಾಗೂ ಮಣ್ಣು ಮತ್ತು ನೀರು ಪರೀಕ್ಷೆಗಾಗಿ ಸಂಪರ್ಕಿಸುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಬೇಸಾಯ ತಜ್ಞರಾದ ಶ್ರೀ. ಜಿ. ಬಿ. ವಿಶ್ವನಾಥ ಇವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ತೋಟಗಾರಿಕಾ ತಜ್ಞ ಶ್ರೀ ಪ್ರವೀಣ ಯಡಹಳ್ಳಿ ಇವರು ವಂದಿಸಿದರು. ಅಲ್ಲದೇ ಮೂರನೇ ದಿನದ ಕೃಷಿ ತಂತ್ರಜ್ಞಾನ ಸಪ್ತಾಹದ ಅಂಗವಾಗಿ ವೈಜ್ಞಾನಿಕ ಪಶುಪಾಲನಾ ಪದ್ಧತಿ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಗದಗದ ಪಶು ಸಂಗೋಪನಾ ವಿಜ್ಞಾನಿಗಳಾದ ಡಾ. ಬಸವರಾಜ ಮುರಗೋಡರವರು ಜಾನುವಾರುಗಳ ಸಾಕಾಣಿಕೆ ಮತ್ತು ನಿರ್ವಹಣೆ ಕುರಿತು ಹೈನುಗಾರಿಕೆ, ಕುರಿ ಮತ್ತು ಆಡು ಹಾಗೂ ಕೋಳಿ ಸಾಕಾಣಿಕಾ ರೈತರಿಗೆ ಮಾಹಿತಿ ನೀಡಿದರು. ಈ ತರಬೇತಿಯಲ್ಲಿ ಬೆಳಗಾವಿ ಜಿಲ್ಲೆಯ ೪೦ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

WhatsApp Group Join Now
Telegram Group Join Now
Share This Article