ಬೆಳಗಾವಿಯಲ್ಲಿ ಮತ್ತೆ ಮಕ್ಕಳ ಕಳ್ಳಸಾಗಣೆ ಪ್ರಕರಣ; ಏಳು ವರ್ಷದ ಬಾಲಕ 4 ಲಕ್ಷ ರೂ.ಗೆ ಮಾರಾಟ: ನಾಲ್ವರ ಬಂಧನ

Ravi Talawar
ಬೆಳಗಾವಿಯಲ್ಲಿ ಮತ್ತೆ  ಮಕ್ಕಳ ಕಳ್ಳಸಾಗಣೆ ಪ್ರಕರಣ;  ಏಳು ವರ್ಷದ ಬಾಲಕ 4 ಲಕ್ಷ ರೂ.ಗೆ ಮಾರಾಟ: ನಾಲ್ವರ ಬಂಧನ
WhatsApp Group Join Now
Telegram Group Join Now

ಬೆಳಗಾವಿ, ಜನವರಿ 22: ಮಕ್ಕಳ ಮಾರಾಟ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಮತ್ತೆ ಬೆಳಗಾವಿಯಲ್ಲಿ ಸದ್ದು ಮಾಡುತ್ತಿವೆ. ಕಳೆದ ಮೂರು ತಿಂಗಳುಗಳಲ್ಲಿ ಮಕ್ಕಳ ಕಳ್ಳಸಾಗಣೆ ಸಂಬಂಧಿತ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.

ಸುಲ್ತಾನಪುರ ಮೂಲದ ಸದಾಶಿವ ಶಿವಬಸಪ್ಪ ಮಗದುಮ್ (ಮಗುವಿನ ಮಲತಂದೆ), ಭಡಗಾಂವ್​ ಮೂಲದ, ಸದ್ಯ ಸುಲ್ತಾನಪುರದಲ್ಲಿ ವಾಸವಿರುವ ಲಕ್ಷ್ಮಿ ಬಾಬು ಗೋಲಭಾವಿ, ಕೊಲ್ಲಾಪುರದ ನಾಗಲಾ ಪಾರ್ಕ್‌ನ ಸಂಗೀತಾ ವಿಷ್ಣು ಸಾವಂತ್, ಅಂಬೇಡ್ಕರ್ ನಗರದ ನಿವಾಸಿ ಮತ್ತು ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಳಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ ಬಂಧಿತ ಆರೋಪಿಗಳಾಗಿದ್ದಾರೆ.

ಶಿವಬಸಪ್ಪ ಮಗದುಮ್, ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಸೇರಿ ಬಾಲಕನನ್ನು ಬೆಳಗಾವಿ ನಗರದ ದಿಲಶಾದ್ ಸಿಕಂದರ್ ತಹಸೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರಿಗೆ ಗಂಡು ಮಗು ಬೇಕಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್’ ವರದಿ ಮಾಡಿದೆ. ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ ಅವರನ್ನು ಮಗದುಮ್ ವಿವಾಹವಾಗಿದ್ದರು. ಮಗದುಮ್ ಅವರಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದರು. ಅವರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಇದರಿಂದ ಬೇಸತ್ತು ಮಗದುಮ್ ಹುಡುಗನನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.

ನಾಲ್ಕು ತಿಂಗಳ ಹಿಂದೆ ಸಂಗೀತಾ ಅವರನ್ನು ಮದುವೆಯಾಗಲು ಮಗದುಮ್​ಗೆ ಲಕ್ಷ್ಮಿ ಸಹಾಯ ಮಾಡಿದ್ದಳು. ಬಳಿಕ ಸಂಚು ರೂಪಿಸಿ ಬಾಲಕನನ್ನು ಕಾರವಾರದ ಕೆಸ್ರೋಳಿಯಲ್ಲಿರುವ ಅನಸೂಯಾ ದೊಡ್ಮನಿ ಎಂಬುವರಿಗೆ ಒಪ್ಪಿಸುವಂತೆ ಕೇಳಿಕೊಂಡಿದ್ದಳು. ಬಳಿಕ ಅನಸೂಯಾ ಬಾಲಕನನ್ನು ಅನಾಥ ಎಂದು ಹೇಳಿ ದಿಲ್ಶಾದ್‌ಗೆ ಮಾರಾಟ ಮಾಡಿದ್ದಾಳೆ ಎಂದು ವರದಿ ಉಲ್ಲೇಖಿಸಿದೆ.

ಏತನ್ಮಧ್ಯೆ, ಬಾಲಕನ ತಾಯಿ ಸಂಗೀತಾ ಕಮ್ಮಾರ್ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಬೈಲಹೊಂಗಲ ಸಮೀಪದ ಗ್ರಾಮವೊಂದರಲ್ಲಿ ಬಾಲಕನನ್ನು ಪತ್ತೆ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article