ಚಂಡೀಗಢ: ಜನವರಿ 21ರಂದು ದಿಲ್ಲಿಗೆ 101 ರೈತರು ನಡೆಸಲು ಉದ್ದೇಶಿಸಿದ್ದ ಕಾಲ್ನಡಿಗೆ ಜಾಥಾವನ್ನು ಮುಂದೂಡಲಾಗಿದೆ ಎಂದು ಪ್ರತಿಭಟನಾನಿರತ ರೈತ ನಾಯಕ ಸರ್ವನ್ ಸಿಂಗ್ ಪಂಧೇರ್ ಸೋಮವಾರ ಪ್ರಕಟಿಸಿದ್ದಾರೆ. ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗಾಗಿ ಖಾತರಿ ಕಾನೂನು ರೂಪಿಸುವ ತಮ್ಮ ಬೇಡಿಕೆಗಳ ಕುರಿತು ಶೀಘ್ರವೇ ಮಾತುಕತೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಅವರು ಒತ್ತಾಯಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿಯಾದ ಶಂಭುದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ ಸಂಚಾಲಕ ಪಂಧೇರ್, ಇದು ಷರತ್ತು ಅಲ್ಲ ಆದರೆ ವಿನಂತಿ, ಆರಂಭದಲ್ಲಿ ಪ್ರಸ್ತಾಪಿಸಿದಂತೆ ಫೆಬ್ರವರಿ 14 ರೊಳಗೆ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಭೆ ಕರೆಯಲಿ ಎಂದು ಒತ್ತಾಯಿಸಿದರು.
“ಜನವರಿ 21 ರಂದು 101 ರೈತರು ದೆಹಲಿಗೆ ಜಾಥಾ ನಡೆಸಲಿದ್ದಾರೆ ಎಂದು ನಾವು ಈ ಹಿಂದೆ ಘೋಷಿಸಿದ್ದೆವು. ನಾವು ಈ ಬಗ್ಗೆ ಚರ್ಚಿಸಿದ್ದೇವೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಸಮಯ ನೀಡಲು ಜನವರಿ 26 ರವರೆಗೆ ಜಾಥಾ ಮುಂದೂಡಲು ಎರಡೂ ವೇದಿಕೆಗಳು ನಿರ್ಧರಿಸಿವೆ. ನಾವು ಜನವರಿ 26 ರಂದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಇದು ನಮ್ಮ ಷರತ್ತು ಅಲ್ಲ, ಆದರೆ ಇದು ರೈತರು ಮತ್ತು ಅವರ ಪ್ರತಿಭಟನೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನವದೆಹಲಿಯಲ್ಲಿ ಆದಷ್ಟು ಬೇಗ ಸಭೆ ಕರೆಯುವಂತೆ ಸರ್ಕಾರಕ್ಕೆ ವಿನಂತಿ” ಎಂದು ಅವರು ಹೇಳಿದರು.