ನವದೆಹಲಿ: ಭಾರತದ ಗ್ರಾಮಗಳ ಸಬಲೀಕರಣ ಪ್ರಯತ್ನಗಳಲ್ಲಿ ಪ್ರಮುಖವಾಗಿರುವ ‘ಸ್ವಾಮಿತ್ವ’ ಯೋಜನೆ ಅಡಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 65 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್ ವಿತರಿಸಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಯೋಜನೆ ಫಲಾನುಭವಿಗಳಿಗೆ ಕಾರ್ಡ್ ಹಂಚಲಿದ್ದು, ಅವರೊಂದಿಗೆ ಮಾತುಕತೆ ನಡೆಸಿ, ದೇಶವನ್ನು ಉದ್ದೇಶಿ ಮೋದಿ ಮಾತನಾಡಲಿದ್ದಾರೆ.
ಛತ್ತೀಸ್ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಸೇರಿದಂತೆ 10 ರಾಜ್ಯಗಳ 50 ಸಾವಿರಕ್ಕೂ ಹೆಚ್ಚು ಗ್ರಾಮದ ಆಸ್ತಿ ಮಾಲೀಕರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಸ್ವಾಮಿತ್ವ ಯೋಜನೆ ಅಡಿ 2.25 ಕೋಟಿ ಆಸ್ತಿ ಕಾರ್ಡ್ ವಿತರಣೆಗೆ ಸಿದ್ಧತೆ ನಡೆಸಲಾಗಿದ್ದು, ಒಂದೇ ದಿನದಲ್ಲಿ 65 ಲಕ್ಷ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ.
ಏನಿದು ಸ್ವಾಮಿತ್ವ ಯೋಜನೆ?: ಸ್ವಾಮಿತ್ವ (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ಮ್ಯಾಪಿಂಗ್) ಯೋಜನೆಯನ್ನು 2020ರ ಏಪ್ರಿಲ್ 4ರಂದು ಪ್ರಾರಂಭ ಮಾಡಲಾಗಿದ್ದು, ಗ್ರಾಮ ವಾಸಿಗಳಿಗೆ ತಮ್ಮ ಆಸ್ತಿ ಹಕ್ಕಿನ ಮಾಲೀಕತ್ವ ನೀಡುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆ ಅಡಿ, ಆಸ್ತಿ ಮಾಲೀಕರಿಗೆ ಹಕ್ಕಿನ ದಾಖಲೆಯನ್ನು ನೀಡಲಾಗುವುದು. ಈ ಆಸ್ತಿ ಕಾರ್ಡ್ ಅನ್ನು ಸುಧಾರಿತ ಡ್ರೋನ್ ಮತ್ತು ಜಿಐಎಸ್ ತಂತ್ರಜ್ಞಾನದ ಮೂಲಕ ಮಾಪನ ಮಾಡಲಾಗುವುದು.
ಇದು ಪಂಚಾಯತ್ ರಾಜ್ ಸಚಿವಾಲಯದ ಉಪಕ್ರಮವಾಗಿದ್ದು, ಅದರ ಮೂಲಕ ಇದನ್ನು ಜಾರಿ ಮಾಡಲಾಗುತ್ತಿದೆ. ಇದು ಗ್ರಾಮೀಣ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಭೂ ಮಾಲೀಕತ್ವ ನೀಡುವ ಮೂಲಕ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.