ಬೆಳಗಾವಿ, ಜನವರಿ 18: ಬೆಳಗಾವಿಯಲ್ಲಿ ಗಾಂಧಿ ಭಾರತ ಯಾತ್ರೆಯ ಪೂರ್ವಭಾವಿ ಕಾಂಗ್ರೆಸ್ ಸಭೆಯಲ್ಲಿ ಗದ್ದಲ, ಗೊಂದಲದ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಇದೀಗ ‘ಕೈ’ ಪಾಳಯದಲ್ಲಿ ಮತ್ತೊಂದು ಬೆಳವಣಿಗೆ ತಲೆ ಎತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಆಪ್ತರೂ ಸೇರಿದಂತೆ, ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ಯೋಜನೆ ಮಾಡಿರುವುದು ತಿಳಿದುಬಂದಿದೆ. ಆದರೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಡಿಸಿಎಂ ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ.
ಬಜೆಟ್ಗೂ ಮುನ್ನ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಶಾಸಕರ ವಿದೇಶ ಪ್ರವಾಸಕ್ಕೆ ಸುರ್ಜೇವಾಲರತ್ತ ಡಿಸಿಎಂ ಡಿಕೆ ಶಿವಕುಮಾರ್ ಬೊಟ್ಟು ಮಾಡಿದ್ದಾರೆ.
ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಬಜೆಟ್ಗೂ ಮುನ್ನ ದುಬೈ, ಸಿಂಗಾಪುರ ಪ್ರವಾಸಕ್ಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ವಿದೇಶ ಪ್ರವಾಸದ ಬಗ್ಗೆ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ್ ಮಾಹಿತಿ ನೀಡಿದ್ದಾರೆ. ನಾಲ್ಕು ದಿನಗಳ ವಿದೇಶ ಪ್ರವಾಸಕ್ಕೆ 8ರಿಂದ 10 ಕಾಂಗ್ರೆಸ್ ಶಾಸಕರು ಪ್ಲ್ಯಾನ್ ಮಾಡಿದ್ದಾರೆ.