ಅಂಬಾರಿ, ಅದ್ಧೂರಿ, ಐರಾವತ, ರಾಟೆಯಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮಂಸ್ ನಡಿ ಕಿಸ್, ಅದ್ಧೂರಿ ಲವರ್ಸ್ ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದೇ ಎಪಿ ಅರ್ಜುನ್ ಫಿಲ್ಮಂಸ್ ನ ಮೂರನೇ ಸಿನಿಮಾ ಅನೌನ್ಸ್ ಆಗಿದೆ.
‘ಲಕ್ಷ್ಮೀಪುತ್ರ’ ಎಂಬ ಟೈಟಲ್ ಇಡಲಾಗಿದ್ದು, ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ. ಲಕ್ಷ್ಮೀಪುತ್ರನಾಗಿ ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ. ಎಪಿ ಅರ್ಜುನ್ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ವಿಜಯ್ ಎಸ್ ಸ್ವಾಮಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿದ್ದಾರೆ. ಅರ್ಜುನ್ ಅವರಿಂದ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ವಿಜಯ್ ಅವರೀಗ ಪೂರ್ಣಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಹಾಗೂ ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಕಾಂಬೋದ ಮೊದಲ ಸಿನಿಮಾವನ್ನು ಅರ್ಜುನ್ ಮಡದಿ ಅನ್ನಪೂರ್ಣ ಎಪಿ ಅರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಲಕ್ಷ್ಮೀಪುತ್ರ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ರವಿಕಿರಣ್ ಗೌಡ ಸಹ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ಡಾ.ಕೆ.ರವಿ ವರ್ಮಾ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಲಕ್ಷ್ಮೀಪುತ್ರ ಚಿತ್ರಕ್ಕಿದೆ. ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ, ರಾಜೇಶ್ ರಾವ್ ಸಹ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಇದೇ ತಿಂಗಳ 24ಕ್ಕೆ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ಸಜ್ಜಾಗಿದೆ.